ಮಂಗಳೂರು ಸಹಿತ ಹಲವೆಡೆ ಎಸಿಬಿ ದಾಳಿ- ದಾಖಲೆ ಪರಿಶೀಲನೆ

ಮಂಗಳೂರು: ಮಹಾನಗರ ಪಾಲಿಕೆಯ ನಗರ ಯೋಜನೆಗಳ ವಿಭಾಗದ ಜಂಟಿ ನಿರ್ದೇಶಕ ಕೆ.ವಿ.ಜಯರಾಮ್ ಅವರ ಮನೆ ಹಾಗೂ ಕಚೇರಿ ಮೇಲೆ ಇಂದು ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಇಂದು ಮುಂಜಾನೆ ಬಿಜೈ ಬಳಿ ಇರುವ ಮನೆ,  ಕಚೇರಿ, ನಗರದ ಪಡೀಲ್ ಬಳಿಯ ಜಯರಾಮ್ ತಂದೆಯ ಮನೆ, ಕೇರಳದಲ್ಲಿರುವ ಜಯರಾಮ್ ಪತ್ನಿಯ ಮನೆ, ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೆಲಸವೊಂದನ್ನು ಮಾಡಿಕೊಡಲು ಲಂಚ ಬೇಡಿಕೆ ಇಟ್ಟ ಆರೋಪದಲ್ಲಿ ಜಯರಾಮ್ ವಿರುದ್ಧ ಸಂತ್ರಸ್ತರೊಬ್ಬರು ಎಸಿಬಿಯಲ್ಲಿ ಈ ಹಿಂದೆ ದೂರು ದಾಖಲಿಸಿದ್ದರು. ಈ ಪ್ರಕರಣದ ಬೆನ್ನತ್ತಿದ ಎಸಿಬಿ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿತ್ತು. ಹೀಗಾಗಿ ಟ್ರ‍್ಯಾಪ್ ಮಾಡುವ ಬದಲು ಅಧಿಕಾರಿಗಳು ದಾಳಿಗೆ ಆಯೋಜಿಸಿದ್ದರು. ಇದೀಗ ದಾಳಿ ನಡೆಸಿದ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ
ಕಾರ್ಯಾಚರಣೆಯಲ್ಲಿ ಎಸಿಬಿ ಎಸ್ಪಿ ಬೋಪಯ್ಯ, ಡಿವೈಎಸ್ಪಿ ಕೆ.ಸಿ.ಪ್ರಕಾಶ್ ಇನ್ಸ್ಪೆಕ್ಟರ್ ಗಳಾದ ಶ್ಯಾಂಸುಂದರ್, ಗುರುರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ.

ರಾಜ್ಯಾದ್ಯಂತ 30 ಕಡೆ ಎಸಿಬಿ ರೇಡ್​ ನಡೆದಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ಚಿತ್ರದುರ್ಗ ಹಾಗೂ ಕಲಬುರಗಿಯ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಜಂಟಿ ನಿಂಬಂಧಕ ಡಿ. ಪಾಂಡುರಂಗ ಗರಗ್ ಅವರಿಗೆ ಸಂಬಂಧಿಸಿದ ವಿಜಯನಗರದ ಮನೆ, ಜಯನಗರ, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿ ನಡೆದಿದೆ . 

ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಎಂಬವರ ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ಗೋಕುಲ ರಸ್ತೆ, ವಿದ್ಯಾನಗರ, ಕೋಟಿಲಿಂಗೆಶ್ವರ ನಗರದ ಮನೆಗಳಲ್ಲಿ ಮೂರು ಎಸಿಬಿ ತಂಡಗಳು  ಪರಿಶೀಲನೆ ನಡೆಸುತ್ತಿವೆ. ಮಾವನ ಬೆಂಗೇರಿ ಬಳಿಯ ಬಾಲಾಜಿ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್​​ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಶ್ರೀನಿವಾಸ್ ​ಧಾರವಾಡ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸೇರಿದ ವಿದ್ಯಾನಗರದ ಮನೆ ಹಾಗೂ‌ ಬಸವೇಶ್ವರ ಮೆಡಿಕಲ್​​‌ ಕಾಲೇಜು ಬಳಿಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮದ‌ ಬಳಿಯ ತೋಟದ ಮನೆ ಮೇಲೂ‌ ದಾಳಿ ನಡೆಸಲಾಗಿದೆ.
 
ಕೋಲಾರದಲ್ಲಿ ಡಿಹೆಚ್​ಓ ಡಾ. ವಿಜಯ್​ ಕುಮಾರ್ ಅವರ ಮನೆ ಕಚೇರಿ ಸೇರಿ ಒಟ್ಟು 6 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ.  ಡಾ.ವಿಜಯ್ ಕುಮಾರ್ ಅವರ ಮನೆ, ಕಚೇರಿ, ಮುಳಬಾಗಿಲಿನಲ್ಲಿರುವ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಮೇಲೆ ಎಸಿಬಿ ಅಧಿಕಾರಿಗಳು ರೇಡ್​ ಮಾಡಿದ್ದಾರೆ.

ಜೊತೆಗೆ ಚಿಂತಾಮಣಿಯಲ್ಲಿರುವ ಮನೆ ಹಾಗೂ ಬೆಂಗಳೂರಿನ ಫ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ಎಸಿಬಿ ಡಿವೈಎಸ್​ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.  ಡಾ.ವಿಜಯ್ ಕುಮಾರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಎಸಿಬಿ ರೇಡ್ ನಡೆದಿದೆ ಎನ್ನಲಾಗಿದೆ. 

Leave a Reply

Your email address will not be published. Required fields are marked *

error: Content is protected !!