ಕೇಂದ್ರ ಬಜೆಟ್ 2021-22 ಬಗ್ಗೆ ಶೇ.45 ಜನರಿಗೆ ಸಮಾಧಾನವಿಲ್ಲ!ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: 2021-22 ರ ಬಜೆಟ್ ಮಂಡನೆಯ ನಂತರ ಷೇರುಪೇಟೆಯ ಗ್ರಾಫ್ ಪುಟಿದೆದ್ದಿತ್ತು. ಆದರೆ ಜನಸಾಮಾನ್ಯರ ದೃಷ್ಟಿಯಿಯಲ್ಲಿ ಇದು ಸಮಾಧಾನಕರ ಬಜೆಟ್ ಆಗಿಲ್ಲ ಎನ್ನುತ್ತಿದೆ ಐಎಎನ್ಎಸ್ ಸಿ-ವೋಟರ್ ಬಜೆಟ್ ಸಮೀಕ್ಷೆ 

1,200 ಜನರಿಂದ ಸಂಗ್ರಹಿಸಲಾದ ಅಭಿಪ್ರಾಯದಲ್ಲಿ ಈ ಸಾಲಿನ ಬಜೆಟ್ ಜನಸಾಮಾನ್ಯನಿಗೆ ಯಾವುದೇ ಉತ್ಸಾಹವನ್ನೂ ಉಂಟುಮಾಡಿಲ್ಲ ಬದಲಾಗಿ ಬೆಲೆಗಳು ಏರಿಕೆಯಾಗಲಿವೆ ಜೀವನದ ಗುಣಮಟ್ಟ ಮತ್ತಷ್ಟು ಕುಸಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದವರ ಪೈಕಿ ಶೇ.45 ರಷ್ಟು ಮಂದಿ ಈ ಬಜೆಟ್ ನಮಗೆ ಸಮಾಧಾನ ತಂದಿಲ್ಲ ಎಂದು ಹೇಳಿದ್ದಾರೆ. ಶೇ.35.8 ರಷ್ಟು ಮಂದಿ ಮಾತ್ರವೇ ಬಜೆಟ್ ಸಮಾಧಾನಕರವಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಬಜೆಟ್ ಮಂಡನೆಯಾದಾಗ ಶೇ.64.2 ರಷ್ಟು ಮಂದಿ ಸಮಾಧಾನಕರ ಬಜೆಟ್ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಾರಿಯ ಬಜೆಟ್ ನ ನಂತರ ಬೆಲೆ ಇಳಿಕೆಯಾಗುವುದಿಲ್ಲ ಎಂದು ಶೇ.46.1 ರಷ್ಟು ಮಂದಿ ಹೇಳಿದ್ದರೆ ಶೇ.18.1 ರಷ್ಟು ಮಂದಿಯ ಪ್ರಕಾರ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಲಿವೆ. 

ಕಳೆದ ವರ್ಷಕ್ಕಿಂತ ಈ ವರ್ಷ ಜೀವನದ ಗುಣಮಟ್ಟ ಹದಗೆಟ್ಟಿದೆ ಎಂದು ಶೇ.50.7 ರಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದು, 2015 ರಿಂದ ಇದೇ ಮೊದಲ ಬಾರಿಗೆ ಮೋದಿ ಸರ್ಕಾರದ ಕುರಿತು ಹೆಚ್ಚು ಜನರು ಅಸಮಾಧನ ವ್ಯಕ್ತಪಡಿಸಿದ್ದಾರೆ. 

ಶೇ.27.6 ರಷ್ಟು ಮಂದಿಗೆ ಮುಂದಿನ ವರ್ಷ ಪರಿಸ್ಥಿತಿ ಸುಧಾರಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದರೆ, ಇಲ್ಲ ಮತ್ತಷ್ಟು ಹದಗೆಡುತ್ತದೆ ಎನ್ನುವವರು ಶೇ.29 ರಷ್ಟು ಮಂದಿ ಇದ್ದಾರೆ. 2021 ನೇ ಸಾಲಿನ ಬಜೆಟ್ ನಿಂದಾಗಿ ತಿಂಗಳ ವೆಚ್ಚಗಳು ಹೆಚ್ಚಾಗಲಿವೆ ಎಂದು ಶೇ.56.4 ರಷ್ಟು ಜನರು ಅಭಿಪ್ರಾಯಪಟ್ಟಿದ್ದರೆ, ಶೇ.16.1 ರಷ್ಟು ಮಂದಿ ಮಾತ್ರವೇ ಬಜೆಟ್ ನಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. 

ಬಜೆಟ್ ನಲ್ಲಿ ಕಪ್ಪುಹಣ ನಿಗ್ರಹ ನಿಬಂಧನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಹೆಚ್ಚಿನ ಸಂಖ್ಯೆಯ ಜನರು, ಬಜೆಟ್ ನಲ್ಲಿ ಕೈಗೊಂಡಿರುವ ಕ್ರಮಗಳು ಸಮಾಧಾನಕರವಾಗಿದೆ ಎಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ದೈನಂದಿಕ ಖರ್ಚು ನಿರ್ವಹಣೆಗೆ ಕಷ್ಟವಾಗಲಿದೆ ಎಂದು ಶೇ.49 ರಷ್ಟು ಮಂದಿ ಹೇಳಿದ್ದರೆ, ಬೆಲೆ ಹೆಚ್ಚಾದರೂ ನಿಭಾಯಿಸಬಹುದಾದ ಮಟ್ಟದಲ್ಲಿದೆ ಎನ್ನುತ್ತಾರೆ ಶೇ.34 ಮಂದಿ

ಇನ್ನು ಪ್ರಧಾನಿ ಮೋದಿ ಅವರ ತಂಡ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾರ್ಯಕ್ಷಮತೆ ಕುರಿತ ಪ್ರಶ್ನೆಗೆ ಶೇ.36.4 ರಷ್ಟು ಮಂದಿ ನಿರೀಕ್ಷೆಗಿಂತಲೂ ಕಳಪೆ ಇದೆ ಎಂದು ಹೇಳಿದ್ದರೆ, ಶೇ.25.1 ರಷ್ಟು ಮಂದಿ ನಿರೀಕ್ಷೆಗಿಂತಲೂ ಉತ್ತಮವಾಗಿದೆ ಎಂದೂ, ಶೇ.27.6 ರಷ್ಟು ಮಂದಿ ನಿರೀಕ್ಷೆಗೆ ತಕ್ಕಂತೆ ಇದೆ ಎಂದೂ ಹೇಳಿದ್ದಾರೆ.

1 thought on “ಕೇಂದ್ರ ಬಜೆಟ್ 2021-22 ಬಗ್ಗೆ ಶೇ.45 ಜನರಿಗೆ ಸಮಾಧಾನವಿಲ್ಲ!ಸಮೀಕ್ಷೆಯಲ್ಲಿ ಬಹಿರಂಗ

  1. ಕೇವಲ ೧೨೦೦ ಜನರ ಅಭಿಪ್ರಾಯ ಸರ್ವಸಮ್ಮತ ವಾಗುವುದಿಲ್ಲ

Leave a Reply

Your email address will not be published. Required fields are marked *

error: Content is protected !!