ಮಾಣಿ: ಬುಲೆಟ್ ಟ್ಯಾಂಕರ್ ಪಲ್ಟಿ, ವಾಹನ ಸಂಚಾರ ಸ್ಥಗಿತ
ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಎಲ್ಪಿಜಿ ಟ್ಯಾಂಕರ್ ಪಲ್ಟಿಯಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇಂದು ಮುಂಜಾನೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ಯಾಂಕರ್ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಕಾರಣ ವಾಹನ ಸಂಚಾರಕ್ಕೆ ತೊಡಕುವುಂಟಾಗಿದೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಸಂಚಾರವನ್ನು ಬೇರೆ ಮಾರ್ಗಗಳಿ0ದ ತೆರಳುವಂತೆ ಸೂಚಿಸುತ್ತಿದ್ದಾರೆ. ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹಾಗೂ ಬೆಂಗಳೂರು, ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳನ್ನು ಮಾಣಿ, ಬುಡೋಳಿ, ಕಬಕ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಅದೃಷ್ಟವಶಾತ್ ಗ್ಯಾಸ್ ಸೋರಿಕೆ ಆಗಿಲ್ಲ, ಟ್ಯಾಂಕರ್ನ್ನು ಬದಿಗೆ ಸರಿಸಿ ವಾಹನ ಸಂಚಾರ ಸುಗಮಗೊಳಿಸುವ ಕೆಲಸ ನಡೆದಿದೆ. ಅನಿಲ ಸೋರಿಕೆ ನಿಯಂತ್ರಿಸುವ ತಾಂತ್ರಿಕ ತಂಡದವರೂ ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳೀಯ ಮಸೀದಿಯ ಧ್ವನಿವರ್ಧಕವನ್ನು ಬಳಸಿ ಪರಿಸರದ ಮನೆಗಳಲ್ಲಿ ಬೆಂಕಿ ಬಳಕೆ ಮಾಡದಂತೆ ಎಚ್ಚರಿಸಲಾಗುತ್ತಿದೆ.