ಉಡುಪಿ: ಫೆ.7ರಂದು ರೈತ ಸಮಾವೇಶ – 2021

ಉಡುಪಿ: ನಗರಗಳಲ್ಲದೆ ಹಳ್ಳಿಗಳಲ್ಲಿ ಕೂಡಾ ಕೃಷಿಯಿಂದ ವಿಮುಖವಾಗುತ್ತಿರುವ ಕೃಷಿಕರಿಗೆ ಹಾಗೂ ಕೃಷಿ ಆಸಕ್ತರಿಗೆ ಕಡಿಮೆ ಖರ್ಚಿನಲ್ಲಿ ಸುಲಭದ ಕೃಷಿ, ಹೈನುಗಾರಿಕೆ, ವಿಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳನ್ನು, ಜಿಲ್ಲೆಯಲ್ಲಿ ಗ್ರಾಮ ಸಮಿತಿಗಳ ಮೂಲಕ ಕೃಷಿ ತಜ್ಞರು-ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಜಿಲ್ಲಾ ಕೃಷಿಕ ಸಂಘವು ಆಯೋಜಿಸಿರುವ ಜಿಲ್ಲಾ ರೈತ ಸಮಾವೇಶ -2021, ಫೆ. 7, ಭಾನುವಾರ ಬೆಳಿಗ್ಗೆ 9:30ರಿಂದ ಸಂಜೆ 3 ತನಕ ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್ ಭಟ್ ಉದ್ಘಾಟಿಸಲಿರುವ ಈ ಸಮಾವೇಶದಲ್ಲಿ ಖ್ಯಾತ ಚಿಂತಕ, ನಿವೃತ್ತ ಉಪನ್ಯಾಸಕರಾದ ತೀರ್ಥಹಳ್ಳಿ ಶ್ರೀಧರ ಮೂರ್ತಿ ಕೆ. ಎಸ್. ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 12ರಿಂದ ಕೃಷಿ ವಿಚಾರ ಗೋಷ್ಠಿಗಳು ನಡೆಯಲಿವೆ. ಉತ್ತಮ ಗೇರು ತಳಿಗಳು ಮತ್ತು ಬೆಳೆ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ವಲಯ ಕೃಷಿ & ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ/ ಲಕ್ಷ್ಮಣ್, ಅಡಿಕೆ ರೋಗ ನಿರ್ವಹಣಾ ತಾಂತ್ರಿಕತೆ ಕುರಿತು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ/ ಧನಂಜಯ; ತೋಟಗಾರಿಕೆಯಲ್ಲಿ ಉತ್ಪಾದನಾ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ಡಿಪ್ಲೋಮ ಕೃಷಿ ಮಹಾವಿದ್ಯಾಲಯದ ಡಾ/ ಕೆ.ವಿ. ಸುಧೀರ್ ಕಾಮತ್ ಮಾತನಾಡಲಿದ್ದಾರೆ.

ಎರಡನೇ ವಿಚಾರ ಗೋಷ್ಠಿಯಲ್ಲಿ ಮಲ್ಲಿಗೆ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಉಪಯುಕ್ತತೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಡಾ/ ಎಚ್.ಎಸ್. ಚೈತನ್ಯ; ಭತ್ತದ ಬೆಳೆಯಲ್ಲಿ ತಳಿ ಸಂರಕ್ಷಣೆ ಕುರಿತು ಬೆಳ್ತಂಗಡಿ ಮಿತ್ತಬಾಗಿಲು ಬಿ.ಕೆ. ಪರಮೇಶ್ವರ ರಾವ್; ಔಷಧೀಯ ಸಸ್ಯಗಳಿಂದ ಆರೋಗ್ಯ ರಕ್ಷಣೆ ಕುರಿತು ಬ್ರಹ್ಮಾವರ ಆಯುರ್ವೇದ ತಜ್ಞ ಡಾ| ಶ್ರೀಧರ ಬಾಯರಿ ಮಾತನಾಡಲಿದ್ದಾರೆ

ಮೂರನೇ ವಿಚಾರ ಗೋಷ್ಠಿಯಲ್ಲಿ ಹೈನುಗಾರಿಕೆಯಲ್ಲಿ ಪ್ರಥಮ ಚಿಕಿತ್ಸೆ ಮತ್ತು ಹಸಿರು ಮೇವಿನ ಅವಶ್ಯಕತೆ ಬಗ್ಗೆ ಉಡುಪಿ ಪಶುಪಾಲನಾ & ಪಶು ವೈದ್ಯಕೀಯ ಸೇವಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಾ/ ಸರ್ವೋತ್ತಮ ಉಡುಪ; ಸ್ವದೇಶಿ ಗೋ ತಳಿಗಳ ಮಹತ್ವ ಕುರಿತು ಕುಕ್ಕೆಹಳ್ಳಿ ಜನನಿ ಫಾರ್ಮ್‌ನ ಬಿ. ನಾಗರಾಜ ಪೈ ಮಾತನಾಡಲಿದ್ದಾರೆ.
ಈ ರೈತ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಉತ್ತಮ ಕೃಷಿ ಸಾಧನೆ ಮಾಡಿರುವ ಐದು ಮಂದಿ ಕೃಷಿಕರನ್ನು ಸನ್ಮಾನಿಸಲಾಗುವುದು. ಕೃಷಿ ಆಸಕ್ತರು, ಕೃಷಿಕ ಬಾಂಧವರು ಈ ರೈತ ಸಮಾವೇಶದಲ್ಲಿ ತಪ್ಪದೇ ಭಾಗವಹಿಸಿ, ಕಡಿಮೆ ಖರ್ಚು, ಶ್ರಮ ಬಳಸಿ ಅಧಿಕ ಇಳುವರಿ-ಲಾಭ ಪಡೆಯುವ ಕೃಷಿ-ತಂತ್ರಜ್ಞಾನಗಳ ಮಾಹಿತಿ ಪಡೆಯುವಂತೆ ಜಿಲ್ಲಾ ಕೃಷಿಕ ಸಂಘದ ಕುದಿ ಶ್ರೀನಿವಾಸ ಭಟ್ ಮತ್ತು ರಾಮಕೃಷ್ಣ ಶರ್ಮ ಬಂಟಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!