ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ, ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧ: ವಿತ್ತ ಸಚಿವೆ ನಿರ್ಮಲಾ
ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಈ ಮಧ್ಯೆ ಸೋಮವಾರ ಲೋಕಸಭೆಯಲ್ಲಿ 2021ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರೈತರ ನೆಮ್ಮದಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡುತ್ತೇವೆ. ವರ್ಷದಿಂದ ವರ್ಷಕ್ಕೆ ನಾವು ಕೃಷಿಯ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚಾಗುತ್ತಿದೆ. ಇದನ್ನು ಎಲ್ಲ ಸದಸ್ಯರೂ ಅರಿಯಬೇಕು ಎಂದು ವಿಪಕ್ಷ ಸದಸ್ಯರ ಘೋಷಣೆ ಮಧ್ಯೆ ನಿರ್ಮಲಾ ಸೀತಾರಾಮನ್ ಇಂದು ಸದನದಲ್ಲಿ ಹೇಳಿದರು.
ಇಂದಿನ ಬಜೆಟ್ ನಲ್ಲಿ ಘೋಷಣೆ: ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದರಿಂದ 1.54 ಕೋಟಿ ರೈತರಿಗೆ ಪ್ರಯೋಜನವಾಗಿದೆ. ಕಳೆದ ವರ್ಷ 1.24 ಕೋಟಿ ಜನರಿಗೆ ಭತ್ತದ ಬೆಂಬಲ ಬೆಲೆಯಿಂದ ಲಾಭವಾಗಿತ್ತು. ಗೋಧಿ ಬೆಳೆಗೆ ಬೆಂಬಲ ಬೆಲೆಯಾಗಿ ಈ ವರ್ಷ 75 ಸಾವಿರದ 060 ಕೋಟಿ ರೂಪಾಯಿ ನೀಡುತ್ತಿದ್ದರೆ ಕಳೆದ ವರ್ಷ 62 ಸಾವಿರದ 802 ಕೋಟಿ ರೂಪಾಯಿ ನೀಡಲಾಗಿತ್ತು.
ಭತ್ತ ಬೆಳೆಗಾರರಿಗೆ ಪ್ರಸಕ್ತ ವರ್ಷ 1.72 ಕೋಟಿ ರೂಪಾಯಿ ನೀಡಲಾಗುತ್ತಿದ್ದು, ಕಳೆದ ಆರ್ಥಿಕ ಸಾಲಿನಲ್ಲಿ 1.41 ಲಕ್ಷ ಕೋಟಿ ನೀಡಲಾಗಿತ್ತು. ಧಾನ್ಯ ಬೆಳೆಗಾರರಿಗೆ ಈ ವರ್ಷ 10 ಸಾವಿರದ 530 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ, ಕಳೆದ ವರ್ಷ 8 ಸಾವಿರದ 285 ಕೋಟಿ ರೂಪಾಯಿ ನೀಡಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ಈ ವರ್ಷ 16.5 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ನೀಡಿಕೆ ಗುರಿಯನ್ನು ಹೊಂದಲಾಗಿದ್ದು, ಕಳೆದ ಬಾರಿ 15 ಲಕ್ಷ ಕೋಟಿ ರೂಪಾಯಿ ಇತ್ತು. ಹಾಳಾಗುವ ಉತ್ಪನ್ನಗಳ ಪಟ್ಟಿಗೆ 22 ಕೃಷಿ ಉತ್ಪನ್ನ ಸೇರ್ಪಡೆ ಮಾಡಲಾಗಿದೆ. ಪಶುಸಂಗೋಪನೆ, ಡೇರಿ, ಮೀನುಗಾರಿಕೆಗೆ ₹40 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ ಎಂದರು.
ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ ಎಂದು ಹೇಳಿದ ನಿರ್ಮಲಾ ಸೀತಾರಾಮನ್, ಖರೀದಿ ಪ್ರಕ್ರಿಯೆ ಮುಂದುವರಿದಿದೆ. ಇನ್ನೂ ಸಾವಿರ ಮಂಡಿಗಳನ್ನು ಎಲೆಕ್ಟ್ರಾನಿಕ್ ರಾಷ್ಟ್ರೀಯ ಮಾರುಕಟ್ಟೆಯ ಜೊತೆ ಸಂಯೋಜಿಸಲಾಗುವುದು. ಈ ವರ್ಷ ಕೃಷಿ ಕ್ರೆಡಿಟ್ ಗುರಿಯನ್ನು 16.5 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ಸಾವಿರಕ್ಕೂ ಅಧಿಕ ಮಂಡಿಗಳನ್ನು ರಾಷ್ಟ್ರೀಯ ಡಿಜಿಟಲ್ ವ್ಯಾಪಾರ ವೇದಿಕೆ ಇನಾಮ್ ನಡಿ ಸಂಯೋಜಿಸಲಾಗುವುದು ಎಂದರು.
ಕಳೆದ ವರ್ಷ ಕನಿಷ್ಠ ಬೆಂಬಲ ಬೆಲೆಯಡಿ 75 ಸಾವಿರದ 100 ಕೋಟಿ ರೂಪಾಯಿಗಳನ್ನು ಗೋಧಿ ಬೆಳೆಗಾರರಿಗೆ ನೀಡಲಾಗಿತ್ತು. ಇದರಿಂದ 43 ಲಕ್ಷ ಗೋಧಿ ಬೆಳೆಗಾರರು ಪ್ರಯೋಜನ ಪಡೆದುಕೊಂಡಿದ್ದರು ಎಂದು ವಿವರಿಸಿದರು.
ಮೂಲಭೂತ ಸೌಕರ್ಯಗಳ ವೃದ್ಧಿಗೆ ಎಪಿಎಂಸಿಗಳ ಮೂಲಕ ಕೃಷಿ ಮೂಲಸೌಕರ್ಯಗಳು ಸಿಗುವಂತೆ ಮಾಡಲಾಗುವುದು. ಇದರಡಿ ನಿಧಿಯನ್ನು 40 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು ಸಣ್ಣ ನೀರಾವರಿ ನಿಧಿಯನ್ನು 10 ಸಾವಿರ ಕೋಟಿ ರೂಪಾಯಿಗಳಿಗೆ ದುಪ್ಪಟ್ಟುಗೊಳಿಸಲಾಗಿದೆ ಎಂದರು.