ಸೋಷಿಯಲ್ ಮೀಡಿಯಾ ನಿಯಂತ್ರಣಕ್ಕೆ ಕಾನೂನು ರಚನೆ ಕೋರಿ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಲು, ನಕಲಿ ಸುದ್ದಿ ಮತ್ತು ಪ್ರಚೋದನಾಕಾರಿ ಹೇಳಿಕೆ ವೈರಲ್ ಆಗಲು ಸಾಮಾಜಿಕ ,ಮಾಧ್ಯಮ ವೇದಿಕೆಗಳನ್ನೇ ಹೊಣೆಗಾರರನ್ನಾಗಿ ಮಾಡುವಂತೆ ಕಾನೂನು ರೂಪಿಸಲು ಕೋರಿ ಸಲ್ಲಿಸಿದ ಮನವಿ ಆಲಿಸಿದ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆ ಕೋರಿ ನೋಟೀಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ  ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ ರಾಮಸುಬ್ರಮಣ್ಯನ್ ಅವರನ್ನೊಳಗೊಂಡ ಪೀಠ ಈ ನೋಟೀಸ್ ಜಾರಿ ಮಾಡಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಚೋದನಾಕಾರಿ ಹೇಳಿಕೆ ಹಾಗೂ ನಕಲಿ ಸುದ್ದಿಗಳನ್ನು ಹರಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ವಕೀಲ ವಿನೀತ್ ಜಿಂದಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಅಲ್ಪಾವಧಿಯೊಳಗೆ ನಕಲಿ ಸುದ್ದಿ ಮತ್ತುಪ್ರಚೋದನಾಕಾರಿ ಭಾಷಣಗಳನ್ನು  ಸ್ವಯಂಚಾಲಿತವಾಗಿ ತೆಗೆದುಹಾಕುವ ವ್ಯವಸ್ಥೆಯನ್ನು ಸ್ಥಾಪಿಸಲು ಮನವಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕೋರಿದೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಒಂದು ಸಂಕೀರ್ಣ ಹಕ್ಕಾಗಿದೆ ಏಕೆಂದರೆ ಅದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರಬಹುದು ಮತ್ತು ಅದು ಸಂಪೂರ್ಣವಲ್ಲ ಮತ್ತು ಅದರೊಂದಿಗೆ ವಿಶೇಷ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದೆ ಎಂದು ಅರ್ಜಿ ಹೇಳಿದೆ.ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಸಾಮಾಜಿಕ ಮಾಧ್ಯಮವನ್ನು ತಲುಪುವಿಕೆ ಹೆಚ್ಚು ಸುಲಭವಾಗಿದೆ ಎಂದಿದ್ದಲ್ಲದೆ ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡು ದೇಶದಲ್ಲಿ ಕೆಲವು ಕೋಮು ಹಿಂಸಾಚಾರದ ಘಟನೆಗಳು ನಡೆದಿರುವುದನ್ನೂ ಸಹ ಉಲ್ಲೇಖಿಸಲಾಗಿದೆ.

ಜನವರಿ 25 ರಂದು, ಉನ್ನತ ನ್ಯಾಯಾಲಯವು ಕೇಂದ್ರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಮತ್ತು ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಶನ್ (ಎನ್ಬಿಎ) ಯಿಂದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಕುರಿತು ಪ್ರತಿಕ್ರಿಯೆಗಳನ್ನು ಕೋರಿತ್ತು, ಇದು  ಮಾಧ್ಯಮ, ಚಾನಲ್‌ಗಳು ಮತ್ತು ನೆಟ್‌ವರ್ಕ್‌ಗಳ ವಿರುದ್ಧ ದೂರುಗಳ ಬಗ್ಗೆ ತೀರ್ಪು ನೀಡಲು ಮಾಧ್ಯಮ ನ್ಯಾಯಮಂಡಳಿಯನ್ನು ಸ್ಥಾಪಿಸಲು ಕೋರಿದೆ.

ಮನವಿಯು ಮಾಧ್ಯಮಗಳು, ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಅಶಿಸ್ತಿನಿಂದ ಓಡುವ ಹುಚ್ಚು ಕುದಿರೆಯಂತೆ ಮಾರ್ಪಟ್ಟಿದೆ.ಅದನ್ನು ಪಳಗಿಸಬೇಕಾಗಿದೆ. ಮಾಧ್ಯಮ ವ್ಯವಹಾರ ನಿಯಮಗಳಿಗೆ ಸಂಬಂಧಿಸಿದ ಸಂಪೂರ್ಣ ಕಾನೂನು ಚೌಕಟ್ಟನ್ನು ಪರಿಶೀಲಿಸಲು ಮತ್ತು ಮಾರ್ಗಸೂಚಿಗಳನ್ನು ಸೂಚಿಸಲು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸಲು ಅದು ಕೋರಿದೆ.

Leave a Reply

Your email address will not be published. Required fields are marked *

error: Content is protected !!