ಉಡುಪಿ: ಕೃಷಿ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್ನಿಂದ ಕಾಲ್ನಡಿಗೆ ಜನಧ್ವನಿ ಜಾಥಾ
ಉಡುಪಿ: ರೈತರಿಗೆ ಬೇಡವಾದ ಕೃಷಿ ಮಸೂದೆಗಳನ್ನು ರದ್ದುಗೊಳಿಸಲು ಸರಕಾರ ಮೀನ ಮೇಷ ಎಣಿಸುತ್ತಿರುವುದು ಖಂಡನೀಯ. ರೈತರ ಬೃಹತ್ ಪ್ರತಿಭಟನೆ ನಡುವೆಯೂ ಕೇಂದ್ರ ಸರಕಾರದ ಅಚಲವಾದ ನಿಲುವಿನ ಬಗ್ಗೆ ದೇಶದ ಜನತೆಗೆ ಸಂಶಯವಿದೆ.
ಈಗಾಗಲೇ ಕೇಂದ್ರ ಸರಕಾರ ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಒಂದೊಂದಾಗಿ ಮಾರುತ್ತಿದೆ. ರೈತರ ಕೃಷಿ ಭೂಮಿಯನ್ನು ಕೂಡಾ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾರುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಹಿನ್ನಲೆಯಲ್ಲಿ ರೈತ ವಿರೋಧಿ ಕರಾಳ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ದೇಶ ವ್ಯಾಪಿ ನಡೆಸುತ್ತಿರುವ ಚಳುವಳಿಗೆ ಬೆಂಬಲವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜನಧ್ವನಿ ಕಾಲ್ನಡಿಗೆ ಜಾಥಾವನ್ನು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಹಿನ್ನಲೆಯಲ್ಲಿ ಜಾಥವು ಕಾಪು ಕ್ಷೇತ್ರದಿಂದ ಪ್ರಾರಂಭಗೊಂಡು ಉಡುಪಿ-ಕುಂದಾಪುರ-ಬೈಂದೂರು ಕ್ಷೇತ್ರದಲ್ಲಿ ಸಮಾಪನ ಗೊಳಿಸುವುದರೊಂದಿಗೆ ಜಾಥಕ್ಕೆ ಪಕ್ಷದ ರಾಜ್ಯದ ಮುಖಂಡರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡಿ ಸರಕಾರವು ಅಡಿಗೆ ಅನಿಲ ಬೆಲೆಯನ್ನು ದ್ವಿಗುಣಗೊಳಿಸಿ ಸಬ್ಸಿಡಿಯನ್ನು ರದ್ದುಗೊಳಿಸಿದೆ. ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಏರಿಕೆಗೊಳಿಸಿ ಜನಸಾಮಾನ್ಯರನ್ನು ಸುಲಿಯುತ್ತಿದೆ. ರೈತ ವಿರೋಧಿ ಕರಾಳ ಕಾನೂನುಗಳನ್ನು ಹಿಂಪಡೆಯಲು ಹಾಗೂ ರೈತರ ಬೇಡಿಕೆಗಳ ತ್ವರಿತ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳುವ ಈ ಕಾಲ್ನಡಿಗೆ ಜಾಥಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿ ಭಾಗವಹಿಸಲು ಪಕ್ಷದ ಪ್ರತಿಯೊಬ್ಬ ಮುಖಂಡರೂ ತೊಡಗಿಸಿಕೊಂಡಾಗ ಜಾಥ ಯಶಸ್ವಿಯಾಗಲು ಸಾಧ್ಯ ಎಂದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ. ಹಿರಿಯಣ್ಣ, ದಿನೇಶ್ ಪುತ್ರನ್, ನವೀನ್ಚಂದ್ರ ಶೆಟ್ಟಿ, ದೇವಕಿ ಸಣ್ಣಯ್ಯ, ವೆರೋನಿಕಾ ಕರ್ನೇಲಿಯೋ, ಮುರಳಿ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಕುಶಲ್ ಶೆಟ್ಟಿ, ಕೀರ್ತಿ ಶೆಟ್ಟಿ, ಸರಸು ಡಿ. ಬಂಗೇರ, ರೋಶನಿ ಒಲಿವರ್, ಜ್ಯೋತಿ ಹೆಬ್ಬಾರ್, ಅಣ್ಣಯ್ಯ ಶೇರಿಗಾರ್, ಪ್ರಶಾಂತ್ ಜತ್ತನ್ನ, ಉದ್ಯಾವರ ನಾಗೇಶ್ ಕುಮಾರ್, ವಿಶ್ವಾಸ್ ಅಮೀನ್, ಹಬೀಬ್ ಅಲಿ, ಸತೀಶ್ ಅಮೀನ್ ಪಡುಕೆರೆ, ದಿನಕರ್ ಹೇರೂರು, ಪ್ರವೀಣ್ ಶೆಟ್ಟಿ, ಸದಾಶಿವ ದೇವಾಡಿಗ ಸೌರಭ್ ಬಲ್ಲಾಳ್, ಶಶಿಧರ ಶೆಟ್ಟಿ ಎಲ್ಲೂರು, ಸಂಕಪ್ಪ ಎ., ಹರೀಶ್ ಶೆಟ್ಟಿ ಪಾಂಗಾಳ, ಕಿಶೋರ್ ಎರ್ಮಾಳ್, ವೈ.ಸುಕುಮಾರ್, ಸತೀಶ್ ಪೂಜಾರಿ, ಚಂದ್ರಶೇಖರ್ ಶೆಟ್ಟಿ, ಪ್ರಭಾಕರ ಆಚಾರಿ, ಬಾಲಕೃಷ್ಣ ಪೂಜಾರಿ, ಉಪೇಂದ್ರ ಮೆಂಡನ್, ರಿಯಾಜ್ ಅಹಮ್ಮದ್, ದೇವಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿಯವರು ಸ್ವಾಗತಿಸಿ, ಉಪಾಧ್ಯಕ್ಷರಾದ ನೀರೆಕೃಷ್ಣ ಶೆಟ್ಟಿ ಧನ್ಯವಾದವಿತ್ತರು.