ಕೃಷಿ ಕಾನೂನುಗಳ ರದ್ದು ಏಕೆ ಸಾಧ್ಯವಿಲ್ಲ ಎಂದು ತಿಳಿಸಿ: ರಾಕೇಶ್ ಟಿಕಾಯತ್
ಗಾಜಿಯಾಬಾದ್: ಕೃಷಿ ಕಾನೂನುಗಳ ರದ್ದು ಏಕೆ ಸಾಧ್ಯವಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ರೈತರಿಗೆ ತಿಳಿಸಲಿ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ರೈತರನ್ನು ಉದ್ದೇಶಿಸಿ ಮಾತನಾಡಿ ರಾಕೇಶ್ ಟಿಕಾಯತ್, ರೈತರು ಗಾಂಧಿವಾದಿ ಅಹಿಂಸೆಯ ತತ್ವವನ್ನು ನಂಬುತ್ತಾರೆ ಮತ್ತು ಸಂವಿಧಾನದ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ ಎಂದ ಅವರು, ಶಾಂತಿ ಕಾಪಾಡಿಕೊಳ್ಳಿ. ಪೊಲೀಸರು ಲಾಠಿ ಚಾರ್ಜ್ ಮಾಡಿದರೂ ರೈತರು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ರಾಜಕೀಯ ಪಕ್ಷಗಳ ಗೂಂಡಾಗಳು ಅವರನ್ನು ಮುಟ್ಟುವ ಧೈರ್ಯ ಮಾಡಿದರೆ, ರೈತರು ಅಥವಾ ಅವರ ಟ್ರ್ಯಾಕ್ಟರುಗಳು ಈ ಸ್ಥಳದಿಂದ ತೆರಳುವುದೇ ಇಲ್ಲ. ಸರ್ಕಾರವು ಪ್ರಪಂಚದ ಮುಂದೆ ತಲೆ ಬಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ‘ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿರಲು ಅಚಲವಾಗಿರುವ ಸರ್ಕಾರದ ತೀರ್ಮಾನವೇನು? ಏನೇ ಆದರೂ ತಾವು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಅಂತೆಯೇ ಸ್ಥಳದಿಂದ ತೆರಳುವುದಕ್ಕಿಂತ ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳುತ್ತೇನೆ. ಸರ್ಕಾರವು ಏಕೆ ಕೃಷಿ ಕಾನೂನುಗಳನ್ನು ರದ್ದುಪಡಿಸುವುದಿಲ್ಲ ಎನ್ನುವುದಕ್ಕೆ ಸೂಕ್ತ ಕಾರಣವನ್ನು ರೈತರಿಗೆ ಹೇಳಬೇಕು ಮತ್ತು ರೈತರು ಪಂಚಾಯತ್ ವ್ಯವಸ್ಥೆಯನ್ನು ನಂಬುವ ಜನರಾಗಿದ್ದೇವೆ. ಪ್ರಪಂಚದ ಮುಂದೆ ನಾಚಿಕೆಯಿಂದ ಸರ್ಕಾರ ತಲೆ ಬಾಗಲು ನಾವು ಎಂದಿಗೂ ಬಿಡುವುದಿಲ್ಲ. ನಾವು ಸರ್ಕಾರದೊಂದಿಗೆ ಸೈದ್ಧಾಂತಿಕ ಹೋರಾಟವನ್ನು ಹೊಂದಿದ್ದೇವೆಯೇ ಹೊರತು ಕೋಲುಗಳು ಮತ್ತು ಬಂದೂಕುಗಳಿಂದ ಹೋರಾಡುವುದಿಲ್ಲ ಅಥವಾ ಅವರಿಂದ ನಿಗ್ರಹಿಸಲ್ಪಡುವುದಲ್ಲ. ಹೊಸ ಕಾನೂನುಗಳನ್ನು ರದ್ದುಪಡಿಸಿದಾಗ ಮಾತ್ರವೇ ರೈತರು ಮನೆಗೆ ಮರಳುತ್ತಾರೆ ಎಂದು ಹೇಳಿದರು.
ದೆಹಲಿ-ಉತ್ತರ ಪ್ರದೇಶದ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಟ್ರಾಕ್ಟರ್ ರ್ಯಾಲಿ ಬಳಿಕ ನಡೆದ ಹಿಂಸಾಚಾರ ರೈತರ ಪ್ರತಿಭಟನಾ ಸ್ವರೂಪವನ್ನೇ ಬದಲಿಸಿತ್ತು. ಹೀಗಾಗಿ ರೈತರ ಪ್ರತಿಭಟನೆ ಬಲ ಕುಂದಿದೆ ಎಂದೇ ಹೇಳಲಾಗಿತ್ತು. ಆದರೆ ಪ್ರತಿಭಟನಾ ಸ್ಥಳದಿಂದ ರಾಕೇಶ್ ಟಿಕಾಯತ್ ರ ಭಾವೋದ್ವೇಗದ ಭಾಷಣ ರೈತರ ಪ್ರತಿಭಟನೆಗೆ ಬಲ ನೀಡಿದ್ದು, ಗಾಜಿಪುರ್ ಗಡಿಯತ್ತ ಉತ್ತರ ಪ್ರದೇಶ ಸೇರಿದಂತೆ ಸಾಕಷ್ಟು ರಾಜ್ಯಗಳಿಂದ ಸಾವಿರಾರು ರೈತರು ಧಾವಿಸುತ್ತಿದ್ದಾರೆ. ಟಿಕಾಯತ್ ಅವರ ಬೆಳೆಯುತ್ತಿರುವ ಶಕ್ತಿಯನ್ನು ಕಂಡು ಹೆಚ್ಚಿನ ರಾಜಕಾರಣಿಗಳು ಅವರ ಹಿಂದೆ ಬಿದ್ದಿದ್ದಾರೆ ಮತ್ತು ಮತ್ತು ಪ್ರತಿಭಟನಾ ಸ್ಥಳದಲ್ಲಿ ಅವರನ್ನು ಭೇಟಿಯಾಗುತ್ತಿದ್ದಾರೆ.
ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಭುಗಿಲೆದ್ದ ಹಿಂಸಾಚಾರದ ನಂತರ ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಬಿಕೆಯು ನೇತೃತ್ವದ ಪ್ರತಿಭಟನೆ ಭುಗಿಲೆದ್ದಂತೆ ಕಂಡುಬಂತು, ಆದರೆ ಮುಜಫರ್‌ನಗರದಲ್ಲಿ ಶನಿವಾರ ರೈತರ ‘ಮಹಾಪಂಚಾಯತ್’ ನಂತರ ಹೆಚ್ಚಿನ ಪ್ರತಿಭಟನಾಕಾರರು ಸೇರಿಕೊಂಡಿದ್ದಾರೆ.