ಕೋವಿಡ್ ನಿಯಮ ಉಲ್ಲಂಘನೆಗೆ 3 ತಿಂಗಳು ಜೈಲು – ಠೇವಣಿದಾರರಿಗೆ ವಂಚಿಸಿದರೆ 7 ವರ್ಷ ಜೈಲು
ಬೆಂಗಳೂರು: ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಮಾಡುವ ಮಸೂದೆ, ಮೂರು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆ ಸೇರಿದಂತೆ 11 ಮಸೂದೆಗಳನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.
ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದರು.
ಯಾವುದೇ ಹಣಕಾಸು ಸಂಸ್ಥೆಯು ಠೇವಣಿದಾರರಿಗೆ ವಂಚನೆ ಮಾಡಿದರೆ ಆರೋಪಿಗಳಿಗೆ 7 ವರ್ಷಗಳ ವರೆಗೆ ಶಿಕ್ಷೆ ಹಾಗೂ 10 ಲಕ್ಷದ ವರೆಗೆ ದಂಡ ವಿಧಿಸಬಹುದು. ಹಣಕಾಸು ಸಂಸ್ಥೆಗೆ ₹5 ಲಕ್ಷದ ವರೆಗೆ ದಂಡ ವಿಧಿಸಲು ಮಸೂದೆಯನ್ನು ಅವಕಾಶ ಕಲ್ಪಿಸಲಾಗಿದೆ.
ನಿಯಮ ಉಲ್ಲಂಘನೆಗೆ 3 ತಿಂಗಳು ಜೈಲು: ಕೋವಿಡ್ ಸಾಂಕ್ರಾಮಿಕ ರೋಗ
ವನ್ನು ಮತ್ತಷ್ಟು ನಿಯಂತ್ರಣಕ್ಕೆ ತರಲು ‘ಸಾಂಕ್ರಾಮಿಕ ರೋಗಗಳ ಕಾಯ್ದೆ’ಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಇದಕ್ಕಾಗಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಮಸೂದೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಂಡಿಸಿದರು.
ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗೆ ₹50 ಸಾವಿರದ ವರೆಗೆ ದಂಡ ಅಥವಾ ಮೂರು ತಿಂಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮೂರು ಹೊಸ ವಿ.ವಿಗಳು: ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯ ಮಸೂದೆ, ವಿದ್ಯಾಶಿಲ್ಪ ವಿಶ್ವವಿದ್ಯಾಲಯ ಮಸೂದೆ ಹಾಗೂ ಏಟ್ರಿಯಾ ವಿಶ್ವವಿದ್ಯಾಲಯ ಮಸೂದೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಡಿಸಿದರು. ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯದ ಹೆಸರನ್ನು ಮರುನಾಮಕರಣ ಮಾಡುವ ‘ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವವಿದ್ಯಾಲಯ, ಬೆಂಗಳೂರು’ ಮಸೂದೆಯನ್ನು ಮಂಡಿಸಲಾಯಿತು.
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆಯನ್ನು ತೋಟಗಾರಿಕಾ ಸಚಿವ ಆರ್.ಶಂಕರ್ ಮಂಡಿಸಿದರು.
ಲೋಕಾಯುಕ್ತರ ಭತ್ಯೆ ಹಾಗೂ ಸೇವಾ ಷರತ್ತುಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಂದಾಯ ವಾಗಬೇಕಾದ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳಿಗೆ ಸಮನಾಗಿ ರೂಪಿಸುವ ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ಮಸೂದೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದರು.
ತೆರಿಗೆ ಪಾವತಿಗೆ ಶೇ 5 ರಿಯಾಯಿತಿ:ಒಂದು ತಿಂಗಳ ಒಳಗೆ ಬಾಕಿ ಇರುವ ತೆರಿಗೆಯನ್ನು ಪಾವತಿಸಿದರೆ ಶೇ 5ರಷ್ಟು ತೆರಿಗೆ ವಿನಾಯಿತಿ ನೀಡಲು ಅನುವು ಮಾಡಿಕೊಡುವ ಕರ್ನಾಟಕ ಪೌರಸಭೆಗಳು ಹಾಗೂ ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆಯನ್ನು ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜು ಮಂಡಿಸಿದರು.
ಕೋವಿಡ್ನಿಂದಾಗಿ 2020–21ನೇ ಹಣಕಾಸು ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿಯ ಕಾಲಮಿತಿಯನ್ನು ವಿಸ್ತರಿಸಲು ಅನುವು ಮಾಡಿಕೊಡಲಾಗಿದೆ.ಅಸ್ತಿತ್ವದಲ್ಲಿರುವ ಸ್ವತ್ತು ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಲು ಅವಕಾಶ ನೀಡುವ ಕರ್ನಾಟಕ ಪೌರಸಭೆಗಳ (ಎರಡನೇ ತಿದ್ದುಪಡಿ) ಮಸೂದೆಯನ್ನು ಸಚಿವರು ಮಂಡಿಸಿದರು.