ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ: ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಉಡುಪಿ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ
ಮತ್ತಿತರ ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪೈಲಟ್ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ವಿವಿಧ ಸಮಸ್ಯೆಗಳ ಕುರಿತು 147 ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು.

ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ರಾಜ್ಯದಲ್ಲೇ ಫೆಬ್ರವರಿಯಿಂದ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಪೈಲಟ್ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಲಾಗಿತ್ತು.

ನಿಗಧಿತ ಸಮಯಕ್ಕೆ ಮುಂಚಿತವಾಗಿಯೇ ಗ್ರಾಮಕ್ಕೆ ಅಗಮಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಥಮದಲ್ಲಿ ನಾಲ್ಕೂರು ಶಾಲೆಗೆ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಪರಿಶೀಲಿಸಿದರು. ಶಾಲಾ ಆವರಣದಲ್ಲಿ ಹಣ್ಣು ಬಿಡುವ ಗಿಡಗಳನ್ನು ನೆಟ್ಟ ಅವರು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಪರೀಕ್ಷೆ ಎದುರಿಸುವ ಕುರಿತು ಆತ್ಮ ವಿಶ್ವಾಸ ಮೂಡಿಸಿದರು.
ನಂತರ ನಾಲ್ಕೂರಿನ ಸಭಾಭವನದಲ್ಲಿನ ಆಯೋಜಿಸಿದ್ದ ಸಾರ್ವಜನಿಕರ ಅರ್ಜಿ ಸ್ವೀಕಾರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪೂರ್ಣಕುಂಭ ಮತ್ತು ಚಂಡೆ ವಾದನದ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಹಿಂದಿನ ದಿನಕ್ಕೆ ಒಟ್ಟು 53 ಸಾರ್ವಜನಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತು ಸ್ಥಳದಲ್ಲೇ 94 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಾರ್ವಜನಿಕರ ಎಲ್ಲಾ ಅರ್ಜಿಗಳನ್ನು ವೀಕ್ಷಿಸಿ, ಅವರೆಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ
ಜಿ.ಜಗದೀಶ್, ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಿದರು. ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್, ಜಾಗ ಮಂಜೂರಾತಿ ಮುಂತಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಂಬoದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನದಲ್ಲಿ ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದ್ದುಪಡಿಗೆ
ಕ್ರಮ ಕೈಗೊಳ್ಳಲಾಗುವುದು ಎಂದರು.

ಪೌತಿ ಖಾತೆ ಬದಲಾವಣೆ ಕುರಿತ ಅರ್ಜಿಗೆ, ವಂಶವೃಕ್ಷ ನೀಡುವ ಮೂಲಕ ಖಾತೆ ಬದಲಾವಣೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 94 ಸಿ ಮತ್ತು ಫಾರ್ಮ್ ನಂ. 57 ರಲ್ಲಿನ ಅರ್ಜಿಗಳು ಬಾಕಿ ಉಳಿದಿದ್ದು, ಹೊಸದಾಗಿ ಕಡತಗಳನ್ನು ತಯಾರಿಸಿ ಕಮಿಟಿ ಮುಂದೆ ಮಂಡಿಸಲು ಕ್ರಮ
ವಹಿಸಲಾಗುವುದು. ರೇಷನ್ ಕಾರ್ಡ್ಗಳಿಗೆ ಸಂಬoಧಿಸಿದoತೆ ಅರ್ಜಿಗಳು ಸ್ವೀಕೃತಗೊಂಡಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮವನ್ನು ಸರಕಾರದ ಸೂಚನೆಯಂತೆ ಆಯೋಜಿಸಿದ್ದು, ಇಂದಿನ ಕಾರ್ಯಕ್ರಮದ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದ ರೂಪು ರೇಷೆಗಳನ್ನು ಉತ್ತಮ
ಪಡಿಸಲು ಸಾಧ್ಯವಾಗಲಿದೆ. ಸಾರ್ವಜನಿಕರು ವಾಸ್ತವ್ಯ ದಿನದಂದು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಷ್ಟೇ ಸಮಯವಾದರೂ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅದೇ ದಿನ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.

ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಆಸ್ಪತ್ರೆಯ ಪರಿಶೀಲನೆ ಮತ್ತು ಅಗತ್ಯ ಕಡತಗಳನ್ನು ಪರಿಶೀಲಿಸಿದರು. ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದ ಸಾಮಾನ್ಯ ಭೋಜನವನ್ನು ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕವಾಗಿಯೇ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಂತರ ಕಜ್ಕೆಯಲ್ಲಿನ ಕುಡುಬಿ ಜನಾಂಗದ ಸಿದ್ದನಾಯ್ಕ ಅವರ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ಕುಡುಬಿ ಜನಾಂಗದವರ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವರ ಯೋಗಕ್ಷೇಮ ಮತ್ತು ಮಕ್ಕಳ ವಿದ್ಯಾಭ್ಯಾಸ, ನಿವೇಶನದ ಅಗತ್ಯತೆ ಕುರಿತು ಮಾಹಿತಿ ಪಡೆದರು. ಕುಡುಬಿ ಜನಾಂಗದ ಸಾಂಪ್ರದಾಯಿಕ ಕಲೆಯನ್ನು ವೀಕ್ಷಿಸಿ, ಸ್ಥಳೀಯರು ಪ್ರೀತಿಯಿಂದ ನೀಡಿದ, ತಾವು ಬೆಳೆದ ತರಕಾರಿಯನ್ನು ಡಿಸಿ ಸ್ವೀಕರಿಸಿದರು.

ನಂತರ ಮಾರಾಳಿಯ ದಲಿತ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದರು. ನಂತರ ನಂಚಾರಿನ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,
ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಬ್ರಹ್ಮಾವರ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಇಬ್ರಾಹಿಂ, ತಹಸೀಲ್ದಾರ್ ಕಿರಣ ಗೌರಯ್ಯ ಮತ್ತಿತರರು ಉಪಸ್ಥಿತರಿದ್ದರು. ಇಡೀ ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ನಾಲ್ಕೂರು ನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ
ಕಾರ್ಯಕ್ರಮ ಯಾವುದೇ ಅಡಚಣೆಗಳಿಗೆ ಆಸ್ಪದ ನೀಡದೇ ಅತ್ಯಂತ ಮುತುವರ್ಜಿಯಿಂದ ಆಯೋಜಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗುವ ಮೂಲಕ ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಪ್ರೇರಣೆ ನೀಡಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಕ್ರಮದ ಯಶಸ್ಸಿಗೆ ಪರಸ್ಪರ
ಸಮನ್ವಯದಿಂದ ಕಾರ್ಯ ನಿರ್ವಹಿಸಿತು.

Leave a Reply

Your email address will not be published. Required fields are marked *

error: Content is protected !!