ಶಶಿ ತರೂರ್ ಮತ್ತು ಆರು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ
ನವದೆಹಲಿ: ಗಣರಾಜ್ಯೋತ್ಸವ ದಿನ ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ಮೃತಪಟ್ಟಿದ್ದ ಯುವಕನೋರ್ವನ ಸಾವಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಹಲವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್, ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ, ನ್ಯಾಷನಲ್ ಹೆರಾಲ್ಡ್ನ ಮ್ರಿನಾಲ್ ಪಾಂಡೆ, ಕೌಮಿ ಆವಾಜ್ನ ಜಾಫರ್ ಆಘಾ, ದಿ ಕ್ಯಾರವನ್ ಸುದ್ದಿ ಸಮೂಹದ ಅನಂತ್ ನಾಥ್ ಮತ್ತು ವಿನೋದ್ ಜೋಶ್ ವಿರುದ್ಧ ಎಫ್ಐಆರ್ ದಾಖಲಾಗಿವೆ.
ಸೆಕ್ಷನ್ 124 ಎ (ದೇಶದ್ರೋಹ), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯ), ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 120ಬಿ (ಮರಣದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕೆ ಅಪರಾಧ ಸಂಚು).ಸೇರಿದಂತೆ 11 ಐಪಿಸಿ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರ್ಯಾಲಿ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದು ಯುವಕನೋರ್ವ ಮೃತಪಟ್ಟಿದ್ದ. ಈ ಸುದ್ದಿಯನ್ನು ಪೂರ್ಣವಾಗಿ ಗ್ರಹಿಸದೇ, ಪೊಲೀಸರ ಗುಂಡೇಟಿಗೆ ಯುವಕ ಮೃತಪಟ್ಟಿದ್ದಾನೆಂದು ಕೆಲ ಮಾಧ್ಯಮಗಳು ವರದಿ ಮಾಡಿದವು. ಆ ವರದಿಗಳನ್ನು ಶಶಿ ತರೂರ್ ಸೇರಿದಂತೆ ಹಲವು ಪತ್ರಕರ್ತರು ಟ್ವೀಟ್ ಮಾಡಿದ್ದರು. ಆದರೆ, ಯುವಕನು ಪೊಲೀಸರ ಗುಂಡೇಟಿಗೆ ಬಲಿಯಾಗಿರಲಿಲ್ಲ ಎಂಬುದು ಪೋಸ್ಟ್ಮಾರ್ಟಂ ವರದಿ ಬಂದ ನಂತರ ತಿಳಿದಿದೆ.
ಯುವಕನ ಸಾವಿನ ಬಗೆಗಿನ ವರದಿಯನ್ನು ತಿರುಚಲಾಗಿದೆ. ಇದು ಪೂರ್ವಾಗ್ರಹ ಪೀಡಿತವಾಗಿದೆ. ಇವರು ‘ರಾಷ್ಟ್ರೀಯ ಸುರಕ್ಷತೆ ಮತ್ತು ಜನರ ಜೀವನವನ್ನು ಅಪಾಯಕ್ಕೆ ದೂಡಿದ್ದಾರೆ’ ಎಂದು ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ.