ಸಿಖ್ ಮತ್ತು ರೈತರ ಬಾವುಟವನ್ನು ಹಾರಿಸಿದ್ದು ಯಾರು? ಭಾರೀ ಚರ್ಚೆ ಆರಂಭ

ನವದೆಹಲಿ: ಕೇಂದ್ರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ಗಣರಾಜ್ಯೋತ್ಸವದಂದು ನಡೆಸಿದ್ದ ಟ್ರ್ಯಾಕ್ಟರ್ ರ‍್ಯಾಲಿ ತೀವ್ರ ಸ್ವರೂಪ ಪಡೆದುಕೊಂಡು ಹಿಂಸಾಚಾರಕ್ಕೆ ತಿರುಗಿದ್ದು ಒಂದೆಡೆ ಸುದ್ದಿಯಾದರೆ, ಮತ್ತೊಂದೆಡೆ ಈ ರ‍್ಯಾಲಿ ನಡುವೆಯೇ ಕೆಂಪು ಕೋಟೆ ಮೇಲೆ ಸಿಖ್ ಮತ್ತು ರೈತರ ಬಾವುಟವನ್ನು ಹಾರಿಸಿರುವ ವಿಚಾರವಾಗಿ ಈ ಬಾವುಟ ಹಾರಿಸಿರುವವರು ಯಾರು ಎಂಬ ಬಗ್ಗೆ ಭಾರೀ ಚರ್ಚೆಗಳೂ ಆರಂಭವಾಗಿದ್ದವು.

ಕೆಂಪು ಕೋಟೆ ಮೇಲೆ ಸಿಖ್ ಮತ್ತು ರೈತರ ಬಾವುಟ ಹಾರಿಸಿರುವ ಕುರಿತಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ. ಸಿಖ್ ಧರ್ಮದ ಬಾವುಟವನ್ನು ಹಾರಿಸಿದ್ದು ನಾನೇ ಎಂಬುದಾಗಿ ಪಂಜಾಬಿ ನಟ ದೀಪ್ ಸಿಧು ಒಪ್ಪಿಕೊಂಡಿದ್ದಾರೆ. ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಅವರು, ತಾನು ಮತ್ತು ತಮ್ಮ ಬೆಂಬಲಿಗರು ರಾಷ್ಟ್ರಧ್ವಜವನ್ನು ತೆಗೆದುಹಾಕಿಲ್ಲ.

ಆದರೆ ಕೆಂಪುಕೋಟೆ ಮೇಲೆ ಸಾಂಕೇತಿಕ ಪ್ರತಿಭಟನಾರ್ಥವಾಗಿ ಸಿಖ್ ಧರ್ಮದ ಗುರುತಾಗಿರುವ “ನಿಶಾನ್ ಸಾಹೀಬ್” ಧ್ವಜವನ್ನು ಏರಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಜ.26ರ ಸಂಜೆ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಿಧು, ನಮ್ಮದು ಯಾವುದೇ ಪೂರ್ವಯೋಜಿತ ಕೃತ್ಯವಲ್ಲ. ಇದಕ್ಕೆ ಯಾವುದೇ ಕೋಮು ಬಣ್ಣ ಬಳಿಯಬೇಕಾದ ಅಗತ್ಯವಿಲ್ಲ ಮತ್ತು ಮೂಲಭೂತವಾದಿಗಳ ಕೈವಾಡವಿಲ್ಲ. ಕೇವಲ ಕಾಯ್ದೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ನಿಶಾನ್ ಸಾಹೀಬ್ ಮತ್ತು ರೈತರ ಧ್ವಜಗಳನ್ನು ಹಾರಿಸಿರುವುದಾಗಿ ತಿಳಿಸಿದ್ದಾರೆ. 

ಈ ನಡುವೆ, ದೀಪ್ ಸಿಧು ಆರಂಭದಿಂದಲೂ ನಮ್ಮ ಪ್ರತಿಭಟನೆಯ ದಿಕ್ಕನ್ನು ತಪ್ಪಿಸಲು ಯತ್ನಿಸಿರುವುದಾಗಿ ಸ್ವರಾಜ್ ಅಭಿಯಾನ್ ಮುಖಂಡ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ. ಶಂಭು ಗಡಿಯಲ್ಲಿ ಸಿಧು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಾಗ ಅವರ ಚಲನವಲನ, ಚಟುವಟಿಕೆ ಗಮನಿಸಿದ ಬಳಿಕ ಈ ವ್ಯಕ್ತಿಯಿಂದ ದೂರ ಉಳಿಯುವಂತೆ ರೈತ ಸಂಘಟನೆಗಳು ನಿರ್ಧರಿಸಿದ್ದವು ಎಂದು ತಿಳಿಸಿದ್ದಾರೆ.

ದೀಪ್ ಸಿಧು 2015ರಲ್ಲಿ ಪಂಜಾಬಿಯ ರಮ್ತಾ ಜೋಗಿ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು. ಈ ಸಿನಿಮಾವನ್ನು ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ಅವರ ಬ್ಯಾನರ್ ನಡಿಯಲ್ಲಿ ನಿರ್ಮಿಸಲಾಗಿತ್ತು. ಐದಾರು ಸಿನಿಮಾಗಳಲ್ಲಿ ನಟಿಸಿರುವ ಸಿಧು ಎನ್ ಐಎ (ರಾಷ್ಟ್ರೀಯ ತನಿಖಾ ದಳ) 2021ರ ಜನವರಿ 21ರಂದು ಸಿಖ್ ಫಾರ್ ಜಸ್ಟೀಸ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.

1 thought on “ಸಿಖ್ ಮತ್ತು ರೈತರ ಬಾವುಟವನ್ನು ಹಾರಿಸಿದ್ದು ಯಾರು? ಭಾರೀ ಚರ್ಚೆ ಆರಂಭ

  1. ಇಂತಹಾ ಕುಕೃತ್ಯ ವನ್ನು ನಡೆಸಿದ ದೇಶದ್ರೋಹಿ ಗಳನ್ನು ಯಾವುದೇ ಮೂಲಾಜಿಲ್ಲದೇ ಬಂಧಿಸಿ, ಅವರಿಗೆ ಜೀವಾವಧಿ ಕಠಿಣ ಶಿಕ್ಷೆಯನ್ನೇ / ಅಥವಾ ಸಾರ್ವಜನಿಕವಾಗಿ ಗಲ್ಲಿಗೇರಿಸಲೇಬೇಕು.. ಅವರನ್ನು ಯಾವುದೇ ಕಾರಣಕ್ಕೂ ಹೊರಬಿಡಬಾರದು. ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡವರೆಲ್ಲರಿಗೂ ಈ ಶಿಕ್ಷೆ ಮಾದರಿಯಾಗಿ ನಿಂತು ದೇಶದ್ರೋಹಿ ಕಾರ್ಯ ನಡೆಸುವವರಿಗೆ ಎಚ್ಚರಿಕೆಯ ಗಂಟೆಯಾಗಲೇಬೇಕು.

Leave a Reply

Your email address will not be published. Required fields are marked *

error: Content is protected !!