ಉಡುಪಿ: ವ್ಯಾಪಾರಿ, ಗ್ರಾಹಕರ ಕೊಂಡಿ ಇ–ಸಮುದಾಯ್ ಆ್ಯಪ್ ಬಿಡುಗಡೆ
ಉಡುಪಿ: ಉಡುಪಿಯಲ್ಲಿ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಗ್ರಾಹಕರು ಹಾಗೂ ಮಾರಾಟಗಾರರ ನಡುವಿನ ಸೇತುವೆಯಾಗಿ ‘ಇ–ಸಮುದಾಯ್’ ಆ್ಯಪ್ ಕಾರ್ಯ ನಿರ್ವಹಿಸಲಿದೆ ಎಂದು ಕಂಪೆನಿಯ ಸ್ಥಾಪಕ ನಿರ್ದೇಶಕ ಅನೂಪ್ ಪೈ ತಿಳಿಸಿದರು. ಬುಧವಾರ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ಇ ಸಮುದಾಯ್ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಹಕರು ಉಡುಪಿಯಲ್ಲಿರುವ ಸ್ಥಳೀಯ ವರ್ತಕರದಿಂದ ಅಗತ್ಯದ ಪದಾರ್ಥಗಳನ್ನು ಮನೆಯಲ್ಲಿ ಕುಳಿತು ಖರೀದಿಸಬಹುದು. ಇದರಿಂದ ಸ್ಥಳೀಯ ವ್ಯಾಪಾರಿಗಳೂ ಬೆಳೆಯುತ್ತಾರೆ, ಗ್ರಾಹಕರಿಗೂ ಉತ್ತಮ ಸೇವೆ ಸಿಗಲಿದೆ ಎಂದು ತಿಳಿಸಿದರು. ಆರಂಭಿಕ ಹಂತವಾಗಿ ಉಡುಪಿಯಲ್ಲಿ ಇ–ಸಮುದಾಯ್ ಆ್ಯಪ್ ಸೇವೆ ಆರಂಭಿಸಿದ್ದು, ಹಂತ ಹಂತವಾಗಿ ಪ್ರಮುಖ ನಗರಗಳಿಗೆ ವಿಸ್ತರಿಸಲಾಗುವುದು. ಗ್ರಾಹಕರಿಗೆ ವಿಭಿನ್ನ ಹಾಗೂ ವಿಶಿಷ್ಟವಾದ ಸೇವೆ ಇ–ಸಮುದಾಯ್ ಆ್ಯಪ್‌ನಲ್ಲಿ ಸಿಗಲಿದೆ ಎಂದು ಅನೂಪ್ ಪೈ ಹೇಳಿದರು. ಇ ಸಮುದಾಯ್ ಸಹಸ್ಥಾಪಕ ರವಿಚಂದ್ರನ್ ಹಳದಿಪುರ ಮಾತನಾಡಿ, ಸ್ಥಳೀಯ ಉತ್ಪನ್ನಗಳ ಖರೀದಿಗೆ ಆ್ಯಪ್ ಸಹಕಾರಿಯಾಗಿದೆ. ಮುಂದೆ ಬೇರೆ ಊರಿನವರು ಉಡುಪಿಯಲ್ಲಿ ಮಾತ್ರ ಸಿಗುವಂತಹ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗುವುದು ಎಂದರು. ಉಡುಪಿ ವಿಭಾಗದ ಮುಖ್ಯಸ್ಥ ಶಿವಾನಂದ್ ಭಟ್ ಮಾತನಾಡಿ, ಸ್ಥಳೀಯವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕು ಆರ್ಥಿಕತೆ ವೃದ್ಧಿಯಾಗುತ್ತದೆ. ಇಲ್ಲಿಯವರೆಗೂ 50 ಮಳಿಗೆಗಳು ಆ್ಯಪ್‌ನಡಿ ಹೆಸರು ನೋಂದಾಯಿಸಿಕೊಂಡಿವೆ. ಮುಂದಿನ 5 ವರ್ಷಗಳಲ್ಲಿ 5000 ಉದ್ಯಮಿಗಳ ವ್ಯಾಪಾರಕ್ಕೆ ಆ್ಯಪ್ ವೇದಿಕೆ ಕಲ್ಪಿಸಲಿದೆ. ಆಸಕ್ತರು https://esamudaay.com/ ಸಂಪರ್ಕಿಸಬಹುದು ಎಂದರು. ಸಂಸ್ಥೆಯ ಎಚ್‌ಆರ್ ವಿಭಾಗದ ಮುಖ್ಯಸ್ಥ ಸುದರ್ಶನ್ ಸಿಂಹನ್ ಇದ್ದರು. |