ಬ್ಲೂಫ್ಲಾಗ್ ನಿಂದ ಸ್ಥಳೀಯರಿಗೆ, ಮೀನುಗಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ಶಶಿಕಾಂತ್

ಉಡುಪಿ: ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಹುತೇಕ ಹೊರರಾಜ್ಯದ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಿಂದ, ಬ್ಯಾಂಕ್‌ನ ಕೆಲಸ ಕಾರ್ಯಗಳಲ್ಲಿ ತೊಂದರೆಯಾಗುತ್ತಿದ್ದು, ಬ್ಯಾಂಕ್ ಸೇವೆಗಳಲ್ಲಿ ಸ್ಥಳೀಯರಿಗೆ ನೆರವಾಗುವಂತೆ ಕನಿಷ್ಠ ಪ್ರಮಾಣದಲ್ಲಿಯಾದರೂ ಕರ್ನಾಟಕ ರಾಜ್ಯದ ಸಿಬ್ಬಂದಿಯನ್ನು ನೇಮಿಸುವಂತೆ ಜಿಲ್ಲಾ ಪಂಚಾಯತ್‌ನಲ್ಲಿ ಗುರುವಾರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನಿಷ್ಠ 2 ಸಿಬ್ಬಂದಿಯಾದರೂ ಕನ್ನಡದವರು ಇದ್ದಲ್ಲಿ ಸ್ಥಳೀಯರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅನ್ಯರಾಜ್ಯದ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಿಂದ, ಬ್ಯಾಂಕ್‌ಗಳಲ್ಲಿ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ ಎಂದು ಸದಸ್ಯ ಬಾಬು ಶೆಟ್ಟಿ ತಿಳಿಸಿದರು.

ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದ ಸಿಬ್ಬಂದಿ ಆಯ್ಕೆಯಾಗುತ್ತಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ತಿಳಿಸಿದರು.
ಬ್ಯಾಂಕ್‌ಗಳಲ್ಲಿ ವಿದ್ಯಾಭ್ಯಾಸ ಸಾಲ ಮತ್ತು ಮುದ್ರಾ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕೂಡಲೇ ಮಂಜೂರು ಮಾಡಿ, ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ. ಸಣ್ಣ ಪುಟ್ಟ ಕಾರಣಗಳಿಗೆ ಅರ್ಜಿಯನ್ನು ತಿರಸ್ಕರಿಸಬೇಡಿ. ಈ ಬಗ್ಗೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ ಹೇಳಿದರು.

ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ನಾಡಿಗೆ ಆಗಮಿಸಿ, ಹಾನಿ ಮಾಡುತ್ತಿದ್ದು, ಇತ್ತೀಚೆಗೆ ಹೆಬ್ರಿಯ ಮತ್ತಾವು ನಲ್ಲಿ ಕರಡಿಯೊಂದು ವ್ಯಕ್ತಿಯೊಬ್ಬರ ಮೇಲೆ ಆಕ್ರಮಣ ಮಾಡಿದೆ ಎಂದು ಜ್ಯೋತಿ ಹರೀಶ್, ಕಾಡುಕೋಣ ಹಾಗೂ ಜಿಂಕೆಯಿಂದ ಸಹ ಅಪಘಾತಗಳು ಸಂಭವಿಸುತ್ತಿವೆ ಎಂದು ಜನಾರ್ಧನ ತೋನ್ಸೆ ತಿಳಿಸುತ್ತಾ ಈ ಬಗ್ಗೆ ಅರಣ್ಯ ಇಲಾಖೆಯಿಂದ ಸೂಕ್ತ ಯೋಜನೆ ರೂಪಿಸಿ, ವನ್ಯ ಜೀವಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸಬೇಕು ಎಂದರು.

ಪಡುಬಿದ್ರೆ ಎಂಡ್ ಪಾಯಿಂಟ್‌ನಲ್ಲಿ ಬ್ಲೂ ಫ್ಲಾಗ್ ಯೋಜನೆಯಿಂದ ಸ್ಥಳೀಯರಿಗೆ ಮತ್ತು ಮೀನುಗಾರರಿಗೆ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಬೀಚ್‌ನಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಸದಸ್ಯ ಶಶಿಕಾಂತ್ ಪಡುಬಿದ್ರೆ ಕೋರಿದರು.
ಸುಜ್ಲಾನ್ ಕಂಪೆನಿಯವರು ತಮಗೆ ನೀಡಿದ್ದ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದು, ಅಂತಹ ಮಾರಾಟದ ಜಾಗವನ್ನು ನೊಂದಣಿ ಮಾಡದ ಕುರಿತು ಸಂಬಂದಪಟ್ಟವರಿಗೆ ಸೂಚಿಸುವಂತೆ ಹಾಗೂ ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಹ ನೀಡಿಲ್ಲ ಎಂದು ಶಶಿಕಾಂತ ಪಡುಬಿದ್ರೆ ತಿಳಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯನ್ನು ಪಡೆಯುತ್ತಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ಪಡೆಯಲು ಆತಂಕ ಪಡುತ್ತಿದ್ದು, ಇದರಿಂದ ಲಸಿಕೆ ನೀಡುವ ನಿಗಧಿತ ಗುರಿ ಸಾಧನೆ ಆಗುತ್ತಿಲ್ಲ ಎಂದು ಸದಸ್ಯ ಸುಮಿತ್ ಶೆಟ್ಟಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ಪಡೆಯುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಸಿಇಓ ಡಾ.ನವೀನ್ ಭಟ್ ತಿಳಿಸಿದರು. ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 22103 ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದು, ಇದುವರೆಗೆ 9299 ಮಂದಿಗೆ ಲಸಿಕೆ ನೀಡಿ, ಶೇ.60.2 ಗುರಿ ಸಾಧಿಸಿದೆ ಎಂದು ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದರು.
ಜಿಲ್ಲೆಯ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕುರಿತಂತೆ ಸಾಕಷ್ಟು ಮುಂಚಿತವಾಗಿ ಪ್ರಚಾರ ನೀಡಿ ಖರೀದಿ ನಡೆಸುವಂತೆ ಹಾಗೂ ಭತ್ತ ಖರೀದಿಯಲ್ಲಿ ಎಂಓ4 ತಳಿಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರುವಂತೆ ಉದಯ ಎಸ್ ಕೋಟ್ಯಾನ್ ತಿಳಿಸಿದರು.
ಕಲ್ಯಾಣಪುರ ವ್ಯಾಪ್ತಿಯಲ್ಲಿ ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಕಾರ್ಯವನ್ನು ಶೀಘ್ರದಲ್ಲಿ ನೀಡುವಂತೆ ಹಾಗೂ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಯೋಜನೆಯಲ್ಲಿ ಜನ್ಮ ದಿನಾಂಕವನ್ನು ಪರಿಗಣಿಸುವಾಗ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸುವಂತೆ ಜನಾರ್ಧನ ತೋನ್ಸೆ ಹೇಳಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!