ಕೋಟ: ಮಕ್ಕಳ ಅಪಹರಣ ಯತ್ನ- ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
ಕೋಟ: ಮಕ್ಕಳ ಅಪಹರಣಕ್ಕೆ ಹೊಂಚು ಹಾಕುತ್ತಿದ್ದರು ಎಂದು ಆರೋಪಿಸಿ ಇಬ್ಬರನ್ನು ಸ್ಥಳೀಯರು ವಶಕ್ಕೆ ಪಡೆದು ಪೋಲೀಸರಿಗೆ ಒಪ್ಪಿಸಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡಟ್ಟು ಸಮೀಪದ ಜಪ್ತಿ ಎಂಬಲ್ಲಿ ಇಂದು ನಡೆದಿದೆ.
ಬೆಂಗಳೂರಿನಿಂದ ಬೈಕಿನಲ್ಲಿ ಬಂದ ಮೂವರ ತಂಡ, ಗುಡ್ಡಟ್ಟು ಸಮೀಪ ಮಕ್ಕಳನ್ನು ಅಪಹರಿಸಲು ಸಂಚು ರೂಪಿಸುತ್ತಿದ್ದ ವೇಳೆ ಸ್ಥಳೀಯರು ಪ್ರಶ್ನಿಸಿದಾಗ ಚಾಕು ತೋರಿಸಿ ಬೆದರಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ.
ಈ ಸಂದರ್ಭ ಎಚ್ಚೆತ್ತ ಸ್ಥಳೀಯರು ಜಪ್ತಿ ಎಂಬಲ್ಲಿ ತಂಡವನ್ನು ಅಡ್ಡಗಟ್ಟಿ ಮೂವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದು ಕೋಟ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಓರ್ವ ಸ್ಥಳೀಯ ವ್ಯಕ್ತಿ ಕೂಡಾ ಭಾಗಿಯಾಗಿದ್ದ ಎನ್ನಲಾಗಿದ್ದು, ಕೋಟ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.