ಮಂಗಳೂರು: ರೈತ ವಿರೋಧಿ ಮಸೂದೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಇಂದು ಮಂಗಳೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರು, ಕೇಂದ್ರ ಸರಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ. ರೈತರು ಕಳೆದ ಹಲವು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಕೂಡ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ ತಾಳುತ್ತಿದೆ ಎಂದರು. ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಅವರು, ಕೇಂದ್ರ ಸರಕಾರದ ಉದ್ಧಟತನದ ವಿರುದ್ಧ ರೈತರು ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ರ್ಯಾಲಿ ನಡೆಸುವುದು ಅನಿವಾರ್ಯ ಎಂದು ಹೇಳಿದರು.
ಈ ಸಂದರ್ಭ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಸಲೀಂ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೊರೇಟರ್ಗಳಾದ ಎ.ಸಿ.ವಿನಯರಾಜ್, ನವೀನ್ ಡಿಸೋಜ, ಸೇವಾದಳದ ಅಧ್ಯಕ್ಷ ಸದಾಶಿವ ಶೆಟ್ಟಿ, ಮುಸ್ತಫಾ ಸಿಎಂ ಮೊದಲಾದವರು ಭಾಗವಹಿಸಿದರು.