ಬ್ರಹ್ಮಾವರ ಸಕ್ಕರೆ ಕಾರ್ಖಾನೆ: ಸಾಲ ಮನ್ನಾ ಹಾಗೂ ಆರ್ಥಿಕ ನೆರವಿಗೆ ಸಿಎಂಗೆ ಬೇಡಿಕೆ
ಬ್ರಹ್ಮಾವರ: ಸರ್ಕಾರ ಈ ಹಿಂದೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ನೆರವಿಗಾಗಿ ಸುಮಾರು ₹30 ಕೋಟಿ ಮೊತ್ತ ಸಾಲ ನೀಡಿದ್ದು, ಈಗ ಆ ಸಾಲದ ಬಡ್ಡಿ ಸುಮಾರು ₹35ಕೋಟಿಗಳಾಗಿದ್ದು, ಒಟ್ಟು ₹65 ಕೋಟಿ ಸಾಲ ಬಾಕಿ ಉಳಿದಿದೆ. ಕಾರ್ಖಾನೆಯ ಪುನರ್‌ನಿರ್ಮಾಣಕ್ಕೆ ಬೆಂಬಲವಾಗಿ ರಾಜ್ಯ ಸರ್ಕಾರ ಕಾರ್ಖಾನೆಯ ಒಟ್ಟು ಸಾಲ ಬಾಕಿ ₹65 ಕೋಟಿ ಮೊತ್ತ ಮನ್ನಾ ಮಾಡಬೇಕು ಎಂದು ಕಾರ್ಖಾನೆಯ ಆಡಳಿತ ಮಂಡಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ. ‘ಪ್ರಸ್ತುತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ರೈತರು, ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಆಶ್ರಯವಾದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರ್ ನಿರ್ಮಾಣಕ್ಕೆ ಸರ್ಕಾರ ₹100 ಕೋಟಿ ಮೊತ್ತದ ಆರ್ಥಿಕ ನೆರವನ್ನು ಮಂಜೂರು ಮಾಡಬೇಕು’ ಎಂದು ಮನವಿಯಲ್ಲಿ ಆಡಳಿತ ಮಂಡಳಿ ಬೇಡಿಕೆ ಸಲ್ಲಿಸಿದೆ. ‘1985ರಲ್ಲಿ ಸಕ್ಕರೆ ಉತ್ಪಾದನೆ ಆರಂಭಿಸಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪ್ರತಿದಿನ 1,250 ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ವಾರಾಹಿ ನೀರಿನ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳದ , ಕಬ್ಬಿನ ಕೊರತೆ ಮತ್ತು ದುಡಿಯುವ ಬಂಡವಾಳದ ಅಭಾವದಿಂದ 2006 ರಲ್ಲಿ ಮುಚ್ಚುಗಡೆಗೊಂಡು ಕಾರ್ಖಾನೆಯ ಎಲ್ಲ 168 ಕಾರ್ಮಿಕರನ್ನು ಸೇವೆಯಿಂದ ವಿಮುಕ್ತಿಗೊಳಿಸಲಾಗಿತ್ತು. ನಂತರ 30 ವರ್ಷಗಳ ಅವಧಿಗೆ ₹ 31.68ಕೋಟಿ ಲೀಸಿಗೆ ‘ರಾಮಿ ಶುಗರ‍್ಸ್’ ನವರಿಗೆ ನೀಡಲಾಗಿತ್ತಾದರೂ ಅವರು ಹಿಂದೆ ಸರಿದಿದ್ದರು’ ಎಂದು ತಿಳಿಸಲಾಗಿದೆ. ‘ಕಾರ್ಖಾನೆಯ ರೈತರ ಕಬ್ಬಿನ ಬಾಕಿ, ಕಾರ್ಮಿಕರ ವೇತನ ಮತ್ತಿತರ ಬಾಕಿ ಹಾಗೂ ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಕಾರ್ಖಾನೆಗೆ ನೀಡಿದ ಠೇವಣಿಯನ್ನು ಮರುಪಾವತಿಸುವ ಸಲುವಾಗಿ ಸರ್ಕಾರ 2013ರಲ್ಲಿ ₹12 ಕೋಟಿ ಸಾಲವನ್ನು ಮಂಜೂರು ಮಾಡಿ ಬಾಕಿ ಹಣ ಪಾವತಿಸಿತ್ತು. 2005ರಿಂದ ಇದುವರೆಗೆ ವಾರಾಹಿ ನೀರಾವರಿ ಯೋಜನೆಗೆ ಒತ್ತು ನೀಡಿದ್ದರಿಂದ 8ಸಾವಿರ ಎಕರೆ ಕೃಷಿ ಭೂಮಿಗೆ ನೀರು ದೊರೆತಿದೆ. ಇದರಿಂದ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಕಬ್ಬು ಅಭಿವೃದ್ಧಿಯಾಗುವುದಾಗಿ ವರದಿ ನೀಡಲಾಗಿದೆ. ಭತ್ತದ ಬೆಳೆಗಿಂತ ರೈತರಿಗೆ ಕಬ್ಬಿನ ಬೆಳೆಯು ಲಾಭದಾಯಕವಾಗಿದ್ದು, ರೈತರು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸುತ್ತಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ‘ಕಬ್ಬು ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಸ್ತುತ ಕಾರ್ಖಾನೆಯ ಕಾರ್ಯ ವ್ಯಾಪ್ತಿಯಲ್ಲಿರುವ ರೈತರ ಹೊಲದಲ್ಲಿ ಕಬ್ಬಿನ ಬೀಜೋತ್ಪಾದನೆಗಾಗಿ ಉತ್ತಮ ತಳಿಯ ಹಾಗೂ ಅಧಿಕ ಇಳುವರಿಯ ಕಬ್ಬಿನ ಬಿತ್ತನೆ ಬೀಜವನ್ನು ಮಂಡ್ಯದಿಂದ ತರಿಸಿ ರೈತರಿಗೆ 2018 ಡಿಸೆಂಬರ್ ತಿಂಗಳಿನಿಂದ ಬೀಜ/ಸಸಿಯನ್ನು ವಿತರಣೆ ಮಾಡಲಾಗಿದೆ. ಈಗಾಗಲೇ ನೂತನ ಆಡಳಿತ ಮಂಡಳಿ ಕಬ್ಬು ಬೆಳೆಗಾರರ ಅಪೇಕ್ಷೆಯ ಮೇರೆಗೆ ಕಾರ್ಖಾನೆಯನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದು, ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಎಕರೆ ಜಾಗದಲ್ಲಿ ಕಬ್ಬು ಬೆಳೆಯುವ ಗುರಿ ಇರಿಸಿ, ಯೋಜನೆಯನ್ನು ರೂಪಿಸಲಾಗಿದೆ. ಸಕ್ಕರೆ ಕಾರ್ಖಾನೆ ಪುನರ್ ನಿಮಾರ್ಣದ ಬಗ್ಗೆ ಜರ್ಮನ್ ಕೈಗಾರಿಕಾ ಸಂಸ್ಥೆಯೊಂದಿಗೆ ಮಾತುಕತೆಯನ್ನು ನಡೆಸಿದ್ದು, ಸಕ್ಕರೆ ಉತ್ಪಾದನೆ ಜತೆಗೆ ಎಥೆನಾಲ್, ವಿದ್ಯುತ್ ಉತ್ಪಾದನೆ, ಎಲ್.ಪಿ.ಸಿ. ತಯಾರಿಕೆ ಘಟಕಗಳನ್ನು ಪ್ರಾರಂಭಿಸಲು ₹100ಕೋಟಿ ಅಂದಾಜುಯೋಜನೆಯನ್ನು ರೂಪಿಸಲಾಗಿದೆ’ ಎಂದೂ ಮನವಿಯಲ್ಲಿ ವಿವರಿಸಲಾಗಿದೆ. ಕಬ್ಬು ಬೆಳೆಗಾರರರಲ್ಲಿ ನಿರೀಕ್ಷೆ: ಸುಮಾರು 20 ವರ್ಷ ಸ್ಥಗಿತವಾಗಿ ಇದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಆಲೆಮನೆ ಆರಂಭವಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಬ್ಬು ಬೆಳೆಗಾರರಲ್ಲಿ ಆಶಾ ಭಾವನೆ ಮೂಡಿದೆ. ಶುದ್ಧ ಬೆಲ್ಲವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಇದೇ 27ರಂದು ಅಧಿಕೃತವಾಗಿ ಆಲೆಮನೆ ಆರಂಭಗೊಳ್ಳಲಿದೆ. ಪ್ರಸ್ತುತ ರೈತರಿಂದ ಟನ್‌ಗೆ ₹2800ಕ್ಕೆ ಕಬ್ಬು ಖರೀದಿ ಮಾಡಲಾಗುತ್ತಿದೆ. ಎರಡು ಮೂರು ವರ್ಷಗಳಲ್ಲಿ ಕಬ್ಬು ಬೆಳೆಸಲು ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತದೆ. ಇದು ರೈತರಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. |