ಪಡುಬಿದ್ರೆ: ಯುಪಿಸಿಎಲ್ 400 ಕೆ.ವಿ ವಿದ್ಯುತ್ ಕೇರಳ ರಾಜ್ಯಕ್ಕೆ

ಮಂಗಳೂರು: ಪಡುಬಿದ್ರೆಯ ಯು.ಪಿ.ಸಿ.ಎಲ್ ವಿದ್ಯುತ್ ಉತ್ಪಾದನಾ ಘಟಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕೇರಳದ ಕಾಸರಗೋಡು ಪ್ರವೇಶಿಸುವ ವಿದ್ಯುತ್ ಮಾರ್ಗ ನಿರ್ಮಾಣ ಯೋಜನೆ ಶುರುವಾಗಿದೆ ಎಂಬ ಸುದ್ದಿಯೊಂದು ವರದಿಯಾಗಿದೆ. 

ಈ ಯೋಜನೆಗಾಗಿ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೊಲ್ಲಪದವು ಖಾಸಗಿಯವರ ಕುಮ್ಕಿ ಜಾಗದಲ್ಲಿ ಯಾವುದೇ ಮಾಹಿತಿ ನೀಡದೆ, ಸರ್ವೇ ಕಾರ್ಯ ನಡೆಸಿ ರಸ್ತೆ ನಿರ್ಮಾಣ ಮಾಡಿ ಟವರ್ ನಿರ್ಮಾಣಕ್ಕೆ ಆಳೆತ್ತರದ ಗುಂಡಿಯನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  ಸುಮಾರು 847 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, 400 ಕೆ.ವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುತ್ತದೆ.  

ಉತ್ತರ ಕೇರಳದ ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಲೋಡ್ ನಿವಾರಣೆಯ ದೃಷ್ಟಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ವಿದ್ಯುತ್ ಮಾರ್ಗ ಸಾಗುವ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ 310 ಕಡೆ ಫೌಂಡೇಶನ್ ನಿರ್ಮಾಣವಾಗಲಿದೆ.

ಇದರಲ್ಲಿ 127 ಟವರ್ ಗಳು ಕೇರಳ ವ್ಯಾಪ್ತಿಯಲ್ಲಿ ಹಾಗೂ 183 ಕರ್ನಾಟಕ ವ್ಯಾಪ್ತಿಯಲ್ಲಿ ಇರಲಿದೆ. ಈ ಯೋಜನೆಯ ಕುರಿತಾಗಿ ವಿದ್ಯುತ್ ಮಾರ್ಗ ಸಾಗುವ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದು, ಸಾರ್ವಜನಿಕ ಜನಜೀವನಕ್ಕೆ ತೊಂದರೆಯಾಗದಂತೆ ಯೋಜನೆಗಳ ಜಾರಿಯಾಗಬೇಕು ಎಂಬುದು ಜನರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!