ಕೋವಿಡ್ ಲಸಿಕೆ ಪಡೆದ 18 ಗಂಟೆಯಲ್ಲೇ ಆರೋಗ್ಯ ಸಿಬ್ಬಂದಿ ಸಾವು!
ಹೈದರಾಬಾದ್: ಕೋವಿಡ್ ಲಸಿಕೆ ಪಡೆದ 18 ಗಂಟೆಗಳಲ್ಲೇ ಆರೋಗ್ಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ಸಂಭವಿಸಿದೆ.
ಈ ಬಗ್ಗೆ ತೆಲಂಗಾಣ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ತೆಲಂಗಾಣ ಆರೋಗ್ಯ ಇಲಾಖೆ ನಡೆಸುತ್ತಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಪೈಕಿ ನಿನ್ನೆ ಕೋವಿಡ್ ಲಸಿಕೆ ಪಡೆದಿದ್ದ ನಿರ್ಮಲ್ ಮೂಲದ ಆರೋಗ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 42 ವರ್ಷದ ಆರೋಗ್ಯ ಸಿಬ್ಬಂದಿಗೆ ನಿನ್ನೆ ಬೆಳಗ್ಗೆ 11.30ಕ್ಕೆ ಕುಂತಲದಲ್ಲಿರುವ ಪಿಎಚ್ ಸಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲಾಗಿತ್ತು. ಆದರೆ ನಿನ್ನೆ ರಾತ್ರಿ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ನಿರ್ಮಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 5.30ರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, ಮಾರ್ಗಸೂಚಿಗಳ ಪ್ರಕಾರ, ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಜಿಲ್ಲಾ ಎಇಎಫ್‌ಐ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ರಾಜ್ಯ ಎಇಎಫ್‌ಐ ಸಮಿತಿಗೆ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದೆ. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಗಳ ಅನ್ವಯ ಲಸಿಕೆಗೂ ಆರೋಗ್ಯ ಸಿಬ್ಬಂದಿ ಸಾವಿಗೂ ಸಂಬಂಧವಿಲ್ಲ ಎಂದೂ ಸ್ಪಷ್ಟನೆ ನೀಡಿದೆ.
ಇನ್ನು ತೆಲಂಗಾಣ ಸರ್ಕಾರವು ತನ್ನ ಲಸಿಕೆ ಕಾರ್ಯಕ್ರಮವನ್ನು ಜನವರಿ 16 ರಂದು ಪ್ರಾರಂಭಿಸಿತ್ತು. ಈ ಪೈಕಿ ತೆಲಂಗಾಣದಲ್ಲಿ ಈ ವರೆಗೂ ಸುಮಾರು 70ಕ್ಕೂ ಹೆಚ್ಚು ಎಇಎಫ್‌ಐ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 3 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.