ಜ.18 ರಿಂದ 28 ವರೆಗೆ ಅತ್ತೂರು ಲಾರೆನ್ಸ್ ಬೆಸಿಲಿಕಾ ‘ಸಾಂತಮಾರಿ’
ಕಾರ್ಕಳ: ತಾಲ್ಲೂಕಿನ ಭಾವೈಕ್ಯ ಕ್ಷೇತ್ರವಾದ ಅತ್ತೂರು ಸೇಂಟ್ ಲಾರೆನ್ಸ್ ಬೆಸಿಲಿಕಾದಲ್ಲಿ ಇಂದಿನಿಂದ (ಜ.18) ವಾರ್ಷಿಕ ಮಹೋತ್ಸವ ‘ಸಾಂತಮಾರಿ’ಗೆ ಚಾಲನೆ ಲಭಿಸಿದೆ. ಈ ಉತ್ಸವ 10 ದಿನಗಳ ಕಾಲ ಸರಳವಾಗಿ ನಡೆಯಲಿದೆ.
ಕೋವಿಡ್–19 ಹಿನ್ನೆಲೆಯಲ್ಲಿ ಈ ಬಾರಿ ‘ಸಾಂತಮಾರಿ’ಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವುದನ್ನು ಬೆಸಿಲಿಕಾ ಆಡಳಿತ ನಿಷೇಧಿಸಿದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿರುವ ಪೂಜೆ, ಪ್ರಾರ್ಥನೆಗಳಲ್ಲಿ ಕೇವಲ 200 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 28ರಂದು ಕೊನೆಯ ಬಲಿಪೂಜೆಯೊಂದಿಗೆ ಸಾಂತಮಾರಿ ಮುಕ್ತಾಯಗೊಳ್ಳಲಿದೆ.
ಬಲಿಪೂಜೆಯಲ್ಲಿ ಭಾಗವಹಿಸು ವವರು ಮಾಸ್ಕ್ ಧರಿಸುವುದು, ಅಂತರ ಪಾಲಿಸುವುದು ಕಡ್ಡಾಯ. ಪೂಜೆಗೆ ಸಂಬಂಧಿಸಿದ ವಸ್ತುಗಳ ಮಾರಾಟಕ್ಕೆ ಬೆಸಿಲಿಕಾದ ಸ್ಟಾಲ್ ಮಾತ್ರವಿದ್ದು, ಇತರೆ ಮಳಿಗೆಳು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.