ಬೈಂದೂರು: ಫಿಶ್‌ವೇಫರ್ಸ್ & ಖಾದ್ಯ ತಯಾರಿಕಾ ಘಟಕಕ್ಕೆ ಜ.19 ರಂದು ಶಂಕುಸ್ಥಾಪನೆ

ಬೈಂದೂರು: ದೇಶದ ಮೊದಲ ಫಿಶ್‌ವೇಫರ್ಸ್ ಮತ್ತು ಮೀನಿನ ಮೌಲ್ಯವರ್ಧಿತ ಖಾದ್ಯಗಳ ತಯಾರಿಕಾ ಘಟಕವಾದ ‘ಮತ್ಸ್ಯಬಂಧನ’ಕ್ಕೆ ಜ. 19ರಂದು ಶಂಕುಸ್ಥಾಪನೆ ನೆರವೇರಲಿದೆ.

ಬೈಂದೂರು-ಕೊಲ್ಲೂರು ರಸ್ತೆಯ ಎಲ್ಲೂರಿನ ವಿಶಾಲ ನಿವೇಶನದಲ್ಲಿ ಈ ಘಟಕವು ಕಾರ್ಯಾಚರಿಸಲಿದೆ.  ಈಗಾಗಲೇ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮೀನಿನ ಖಾದ್ಯಗಳಿಗೆ ಮಾರುಕಟ್ಟೆ ಒದಗಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ‘ಮತ್ಸ್ಯಬಂಧನ’ ಸಂಸ್ಥೆಯ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ, ನಿರ್ದೇಶಕ ಅರುಣ್ ಧನಪಾಲ್‌ ತಿಳಿಸಿದ್ದಾರೆ.

ಜೂನ್ 18ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ಸ್ಯಬಂಧನ ಸಂಸ್ಥೆಯ ಮೌಲ್ಯವರ್ಧಿತ ಖಾದ್ಯಗಳನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ಒಂದು ತಯಾರಿಕಾ ಘಟಕ ಇದೆ. ಇದೀಗ ಎಲ್ಲೂರಿನಲ್ಲಿ ಪೂರ್ಣಪ್ರಮಾಣದ ಮತ್ತೊಂದು ತಯಾರಿಕಾ ಘಟಕ ಆರಂಭಗೊಳ್ಳಲಿದೆ.

ಎಲ್ಲೂರಿನ ಈ ತಯಾರಿಕಾ ಘಟಕದಿಂದ ಹಿಂದುಳಿದ ಬೈಂದೂರು ತಾಲ್ಲೂಕಿನ ಆರ್ಥಿಕ ಪ್ರಗತಿಯ ವೇಗ ವರ್ಧಿಸಲಿದೆ. ನೂರಾರು ಕೈಗಳಿಗೆ ಉದ್ಯೋಗ ಲಭಿಸಲಿದೆ. ಘಟಕವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಿದ್ದು, ಪರಿಸರ ಸ್ನೇಹಿಯಾಗಿ ಇರಲಿದೆ’ ಎನ್ನುತ್ತಾರೆ ಗೋವಿಂದ ಬಾಬು ಪೂಜಾರಿ.

ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಚಿಪ್ಸ್ ಮತ್ತು ವೇಪರ್ಸ್‌ಗಳು ಜಂಕ್‌ಫುಡ್‌ ಆಗಿರುವುದರಿಂದ ಆರೋಗ್ಯಕ್ಕೆ ಹಾನಿಕರ. ಅವುಗಳಿಗೆ ಬದಲಿ ಸ್ನ್ಯಾಕ್ ಶೋಧನೆಗೆ ಹೊರಟಾಗ ಗೋಚರಿಸಿದ್ದು ಫಿಶ್ ವೇಫರ್ಸ್. ಇದರಲ್ಲಿ ರಾಸಾಯನಿಕ ಅಥವಾ ಸಂರಕ್ಷಕಗಳನ್ನು ಬಳಸುವುದಿಲ್ಲ. ಬದಲಿಗೆ ಧಾರಾಳ ಪ್ರೊಟೀನ್ ಇರುತ್ತದೆ. ಒಮೆಗಾ 3 ಕೊಬ್ಬಿನ ಅಂಶ, ವಿಟಮಿನ್ ಡಿ, ಬಿ2, ಬಿ12 ಹಾಗೂ ಕ್ಯಾಲ್ಸಿಯಂ ಇರುತ್ತದೆ. ತಾಜಾ ಮೀನುಗಳಿಂದ ತಯಾರಿಸಿದ ಫಿಶ್ ವೇಫರ್ಸ್ ಆರೋಗ್ಯವರ್ಧಕ ಎನ್ನುವುದು ತಜ್ಞರ ಅಭಿಮತ.

ಉದ್ಘಾಟನೆಗೆ ಸಕಲ ಸಿದ್ಧತೆ
ಇದೇ ಜ.19ರಂದು ಮಧ್ಯಾಹ್ನ 1.30ಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರು ಘಟಕ ಉದ್ಘಾಟಿಸುವರು. ಸಚಿವ ಎಸ್. ಅಂಗಾರ, ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಕೆ. ಜಯಪ್ರಕಾಶ ಶೆಟ್ಟಿ, ಕೆ. ಗೋಪಾಲ ಪೂಜಾರಿ, ಉಭಯ ಜಿಲ್ಲೆಗಳ ಶಾಸಕರು ಮತ್ತು ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ಕುಮಾರ್, ಆಡಳಿತ ನಿರ್ದೇಶಕ ಎಂ. ಎಲ್. ದೊಡ್ಮನಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಮತ್ತಿತರರು ಭಾಗವಹಿಸುವರು.

ಎಲ್ಲೂರಿನ ಘಟಕದಲ್ಲಿ 6 ತಿಂಗಳೊಳಗೆ ಉತ್ಪಾದನೆ ಆರಂಭಿಸಲಿದ್ದೇವೆ. ಸ್ಥಳೀಯರು ಸೇರಿದಂತೆ ನೂರಾರು ಜನರಿಗ ಈ ಘಟಕ ಉದ್ಯೋಗ ಒದಗಿಸಲಿದೆಂದು ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!