ಕೌನ್ ಬನೇಗ ಕರೋಡ್ ಪತಿಯಲ್ಲಿ ಗೆದ್ದ ಹಣವೂ ಸಮಾಜ ಸೇವೆಗೆ: ರವಿ ಕಟಪಾಡಿ
ಕಟಪಾಡಿ: ಹಿಂದಿಯ ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಕೌನ್ ಬನೇಗ ಕರೋಡ್ ಪತಿಯಲ್ಲಿ ಉಡುಪಿಯ ರವಿ ಕಟಪಾಡಿ ಅವರು ಭಾಗವಹಿಸುತ್ತಿದ್ದಾರೆ ಎಂಬ ವಿಚಾರ ಕರಾವಳಿಯಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ 12.5ಲಕ್ಷ ರೂಗಳನ್ನು ಗೆದ್ದು ಬಂದಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, ಕೆಬಿಸಿಯ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವುದೇ ಕೋಟಿ ರೂ. ಗಳಿಗೆ ಸಮ ಎಂದೆನಿಸುತ್ತದೆ. ಇದರೊಂದಿಗೆ ಬಾಲಿವುಡ್‌ನ ಬಿಗ್ ಬಿ ಅಮಿತಾ ಬಚ್ಚನ್, ಅನುಪಮ್ ಖೇರ್ ಅವರ ಜೊತೆ ಕಳೆದ ಕ್ಷಣಗಳು ಜೀವನದ ಅತ್ಯಮೂಲ್ಯ ಕ್ಷಣಗಳಾಗಿವೆ. ಅಮಿತಾ ಬಚ್ಚನ್ ಅವರೊಂದಿಗೆ ತುಳು ಭಾಷೆಯಲ್ಲಿ ಮಾತನಾಡಿದ್ದು ತುಂಬಾ ಖುಷಿ ಕೊಟ್ಟಿದ್ದು, ನನ್ನ ನಾಡಿನ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು. ಇದರೊಂದಿಗೆ ತನ್ನೊಂದಿಗೆ ಮಾತನಾಡಿದ ಅಮಿತಾ ಬಚ್ಚನ್ ಅವರು, ತನ್ನ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಪ್ರೋತ್ಸಾಹ ನೀಡಿದ್ದು ಮಾತ್ರವಲ್ಲದೆ ಈ ಕಾರ್ಯವನ್ನು ಮುಂದುವರೆಸಿ ಎಂದು ಸಲಹೆ ನೀಡಿದರು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮ್ಮ ಕ್ಷಣಗಳನ್ನು ಸಂತಸದಿಂದ ಮೆಲುಕು ಹಾಕಿದ್ದಾರೆ. ಇದೇ ವೇಳೆ ತಮ್ಮ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಪತ್ರಿಕಾ ಮಾಧ್ಯಮ, ಊರಿನ ಜನರು ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.
ಇದೇ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಮಾಜ ಸೇವಕ ಮಹೇಶ್ ಶೆಣೈ ಅವರು ಮಾತನಾಡಿ, ಜಿಲ್ಲೆಯ ಅನೇಕ ಅಶಕ್ತ ಮಕ್ಕಳ ಪಾಲಿಗೆ ಬೆಳಕಾಗುವ ರವಿ ಅವರು ತಮ್ಮ ಬಾಳಿನಲ್ಲಿ ಕಷ್ಟಪಟ್ಟ ಬಗ್ಗೆ ಮಾಹಿತಿ ಹಂಚಿಕೊಂಡರು. ರವಿ ಕಟಪಾಡಿ ಅವರು ಓರ್ವ ಆದರ್ಶ ವ್ಯಕ್ತಿ, ಅವರ ಅಕ್ಕನ ಮಗಳ ಚಿಕಿತ್ಸೆಗೆ ಹೆಚ್ಚಿನ ಮೊತ್ತದ ಹಣ ಬೇಕಿದ್ದ ಸಂದರ್ಭದಲ್ಲಿ, ಬಡ ಮಕ್ಕಳ ಚಿಕಿತ್ಸೆಗೆಂದು ಸಂಗ್ರಹಿಸಿದ ಹಣ ಇದೆ ಇದನ್ನು ಬಳಸಿಕೊಲ್ಳುವ ಎಂದಾಗ ಅದಕ್ಕೆ ಒಪ್ಪದ ರವಿ ಕಟಪಾಡಿ ಅವರು, ತಾನು ಹಣ ಒಟ್ಟು ಮಾಡಿರುವುದು ಬಡ ಅಶಕ್ತ ಮಕ್ಕಳ ನೆರವಿಗಾಗಿ, ಆ ಹಣ ನಾನು ಬಳಸುವುದಿಲ್ಲ. ನಮಗೆ ದೇವರು ಶಕ್ತಿ ಕೊಟ್ಟಿದ್ದಾನೆ ದುಡಿಯುವ ಎಂದಿದ್ದರೂ. ಅಲ್ಲದೆ, ಅಕ್ಕಳ ಮಗಳ ಚಿಕಿತ್ಸೆಗೆ ಬೇರೊಬ್ಬರಿಂದ ಸಾಲ ಮಾಡಿದರೇ ಹೊರತು ತಾನು ವೇಷ ಹಾಕಿ ಸಂಗ್ರಹಿಸಿದ ಹಣವನ್ನು ಬಳಸಿಕೊಂಡಿರಲ್ಲ ಎಂದು ರವಿ ಕಟಪಾಡಿಯವರ ಸ್ವಾಭಿಮಾನ ಹಾಗೂ ಆದರ್ಶದ ಗುಣದ ಬಗ್ಗೆ ತಿಳಿಸಿದರುಈ ವೇಳೆ ತಮ್ಮ ಅಕ್ಕನ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಪಟ್ಟ ಕಷ್ಟವನ್ನು ನೆನೆದು ರವಿ ಕಟಪಾಡಿ ಅವರು ಕಣ್ಣೀರಿಟ್ಟರು.
ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಪ್ರತೀ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ವಿಭಿನ್ನ ವಿಶಿಷ್ಟ ವೇಷ ಧರಿಸಿ ಜನರನ್ನು ರಂಜಿಸುವ ಜೊತೆಗೆ ಅದರಿಂದ ಗಳಿಸಿದ ಮೊತ್ತವನ್ನು ಆಯ್ದ ಅಶಕ್ತ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತಾ ಅವರ ಬಾಳಲ್ಲಿ ಆಶಾ ಕಿರಣವಾಗಿದ್ದಾರೆ. ಇದುವರೆಗೆ ಜಿಲ್ಲೆಯ 28 ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ. ರವಿ ಕಟಪಾಡಿ ಅವರ ಈ ಮಾನವೀಯ ಸಮಾಜಮುಖಿ ಸೇವಾಕಾರ್ಯ ಗುರುತಿಸಿ ವಾಹಿನಿ ಅವರಿಗೆ ಈ ಅವಕಾಶ ನೀಡಿತ್ತು. ಜ.15 ರಾತ್ರಿ ಪ್ರಸಾರವಾದ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಕಾರ್ಯಕ್ರಮದಲ್ಲಿ ರವಿ ಕಟಪಾಡಿ ಹಾಗೂ ಅಂಬಾ ಬೆಹಾನ್ ಜಂಟಿಯಾಗಿ 25 ಲಕ್ಷ ರೂ. ಮೊತ್ತವನ್ನು ಗೆದ್ದಿದ್ದಾರೆ. ಇದರಿಂದ ಬಂದ ಹಣವನ್ನು ಸಮಾಜ ಕಾರ್ಯಕ್ಕೆ ಬಳಸುವುದಾಗಿ ರವಿ ಕಟಪಾಡಿ ತಿಳಿಸಿದ್ದಾರೆ.