ಯುಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡಲು ಅಪಹರಣದ ನಾಟಕ: ಮೂವರ ಬಂಧನ

ಮಂಗಳೂರು :  ನಗರದ  ಪದವಿನಂಗಡಿ ಬಳಿಯ ಕೊಂಚಾಡಿಯಲ್ಲಿರುವ ದೇವಸ್ಥಾನದ ಸಮೀಪ ನಡೆದಿದ್ದ ಬಾಲಕನ ಅಪಹರಣ ಯತ್ನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಮೂವರು ಆರೋಪಿಗಳು ತಾವು ಯುಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡಲು ಅಪಹರಣದ ನಾಟಕವಾಡಿರುವುದಾಗಿ ಹೇಳಿದ್ದು, ಅಸಲಿಗೆ ಆರೋಪಿಗಳು ನಿಜ ಹೇಳುತ್ತಿದ್ದಾರೋ ಅಥವಾ ಸುಳ್ಳು ಹೇಳುತ್ತಿದ್ದಾರೋ ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದು, ಘಟನೆಯ ಹಿಂದೆ ಆರೋಪಿಗಳ ಉದ್ದೇಶದ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.  ಅಲ್ಲದೆ ಆರೋಪಿಗಳು ಗಾಂಜಾ ಸೇವನೆಗೆ ಒಳಗಾಗಿದ್ದಾರೆಯೇ ಎನ್ನುವ ಬಗ್ಗೆ ಅಧ್ಯಯನ ಮಾಡಲು ಅವರ ರಕ್ತದ ಮಾದರಿಗಳನ್ನು ಕೂಡಾ ಪರಿಶೀಲನೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಾವೂರಿನ ರಕ್ಷಕ್ ಶೆಟ್ಟಿ (22), ಬೋಂದೆಲ್‌ನ ಅಲಿಸ್ಟರ್ ತಾವ್ರೋ (21) ಹಾಗೂ ಕಾವೂರಿನ ಕೆ.ಐ.ಓ.ಸಿ.ಎಲ್ ಕ್ವಾಟರ್ಸ್ನ ರಾಹುಲ್ ಸಿನ್ಹ (21) ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ದ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ರಕ್ಷಕ್ ಶೆಟ್ಟಿ ವಿರುದ್ದ ಮಂಗಳೂರು ಪೂರ್ವ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಬೋಂದೆಲ್‌ನ ಅಲಿಸ್ಟರ್ ತಾವ್ರೋ  ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಮೂರು ಎಸ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ರಾಹುಲ್ ಸಿನ್ಹ ವಿರುದ್ದ ಕಾವೂರು ಠಾಣೆಯಲ್ಲಿ ಎಸ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. 

ಜ.14ರಂದು ಸಂಜೆ 7 ಗಂಟೆ ವೇಳೆಗೆ ಮೂವರು ಬಾಲಕರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಬಾಲಕರ ಬಳಿ ನಿಲ್ಲಿಸಿ, ಓರ್ವನ ಮೇಲೆ ಗೋಣಿ ಚೀಲದ ಮುಸುಕು ಹಾಕಿ ಹಿಡಿಯಲು ಯತ್ನಿಸಿದ್ದಾರೆ. ಈ ಸಂದರ್ಬ ಅಪಾಯವನ್ನರಿತ ಜತೆಗಿದ್ದ ಬಾಲಕ ಶಿವಂ ಕಾಮತ್ ಎಂಬಾತ ಅಲ್ಲಿಯೇ ಸಿಕ್ಕಿದ ಕಲ್ಲು, ಮಣ್ಣಿನಿಂದ ಅಪಹರಣಕಾರರ ಮೇಲೆ ದಾಳಿ ನಡೆಸಿ, ಬೊಬ್ಬೆ ಹಾಕಿದ್ದಾನೆ. ಈ ವೇಳೆ ದುಷ್ಕರ್ಮಿಗಳು ಸಿಕ್ಕಿ ಬೀಳುವ ಅಪಾಯದಿಂದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!