ಜನಸಾಮಾನ್ಯರ ಸುಲಿಗೆಯೇ ಸರಕಾರದ ಸಾಧನೆ: ಅಶೋಕ್ ಕೊಡವೂರು
ಉಡುಪಿ: ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 42 ಶೇ.ರಷ್ಟು ಮತ ಗಳಿಕೆಯೊಂದಿಗೆ ಕಳೆದ ಪಂಚಾಯತ್ ಚುನಾವಣೆಗಿಂತ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಈಗಾಗಲೇ ಗ್ರಾಮೀಣ ಸಮಿತಿಗಳ ರಚನೆಗೆ ಚಾಲನೆ ನೀಡಿ ಆ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಈಗಿಂದೀಗಲೇ ತಯಾರಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತ, ಕೊರೋನಾದಿಂದಾಗಿ ಜನತೆ ಆರ್ಥಿಕ ಸಂಕಷ್ಟದಲ್ಲಿರುವಾಗಲೇ ಸರಕಾರ ಇಂದನ, ತೈಲ, ಅಡುಗೆ ಅನಿಲಗಳ ಬೆಲೆ ಏರಿಕೆಗೊಳಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಹಾಕಿದೆ ಅದರೊಂದಿಗೆ ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಪ್ರಸ್ತಾಪ, ಆಸ್ತಿ ತೆರಿಗೆ ಹೆಚ್ಚಳದ ತೀರ್ಮಾನ ಖಂಡನೀಯ. ಖಾಲಿ ನಿವೇಶನಕ್ಕೂ ತೆರಿಗೆ ವಿಧಿಸುವ ಸರಕಾರದ ನಿರ್ಣಯ ಅಸಮರ್ಥನೀಯ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವುದೇ ಸರಕಾರಗಳ ಸಾಧನೆಯಾಗಿದೆ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ತರಬೇತಿ ಶಿಬಿರ ಏರ್ಪಡಿಸುವ ಬಗ್ಗೆ ಚಿಂತನೆ ನಡೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಪಕ್ಷದ ತತ್ವ ಸಿದ್ದಾಂತದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದೊಂದಿಗೆ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆ ನಿಮಿತ್ತ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲು ಸಲಹೆ ನೀಡಿದರು.
ಗ್ರಾಮೀಣ ಸಮಿತಿ ರಚಿಸುವ ಬಗ್ಗೆ ಬ್ಲಾಕ್ ಅಧ್ಯಕ್ಷರುಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಪ್ರಸ್ತುತ ವರ್ಷದಲ್ಲಿ ಬರುವ ಪಕ್ಷದ ಕಾರ್ಯಕ್ರಮಗಳನ್ನು ಸಂಘಟಿಸಲು ವಿವಿಧ ಘಟಕಗಳಿಗೆ ಜವಾಬ್ದಾರಿಯನ್ನು ನೀಡಲಾಯಿತು.
ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿ ಇತ್ತೀಚಿಗೆ ನಿಧನರಾದ ಹಲವಾರು ಮಹನೀಯರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಕುಶಲ್ ಶೆಟ್ಟಿಯವರು ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ನೀರೆಕೃಷ್ಣ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಳೆ, ಶ್ಯಾಮಲ ಭಂಡಾರಿ, ಬಿ. ನರಸಿಂಹ ಮೂರ್ತಿ, ಭುಜಂಗ ಶೆಟ್ಟಿ, ಶಬ್ಬೀರ್ ಅಹ್ಮದ್, ಸುಧಾಕರ ಕೋಟ್ಯಾನ್, ಜ್ಯೋತಿ ಹೆಬ್ಬಾರ್, ಯತೀಶ್ ಕರ್ಕೇರಾ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೀರ್ತಿ ಶೆಟ್ಟಿ ಹಬೀಬ್ ಆಲಿ, ಪ್ರಶಾಂತ್ ಜತ್ತನ್ನ, ವೈ. ಸುಕುಮಾರ್, ಮಹಾಬಲ ಕುಂದರ್, ರಿಯಾಜ್ ಅಹ್ಮದ್, ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಮಮತಾ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಸೌರಬ್ ಬಲ್ಲಾಳ್, ಸಂಕಪ್ಪ ಎ, ಸುರೇಶ್ ನಾಯ್ಕ್, ವಿಲ್ಸನ್ ರೋಡ್ರಿಗಸ್, ಉದ್ಯಾವರ ನಾಗೇಶ್ ಕುಮಾರ್, ಕಿಶೋರ್ ಎರ್ಮಾಳ್, ಮುರಳಿ ಶೆಟ್ಟಿ, ಸಂಪಿಗೆಹಾಡಿ ಸಂಜೀವ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಅಮೀನ್ ಪಡುಕರೆ, ಹೆಚ್. ಹರಿಪ್ರಸಾದ್ ಶೆಟ್ಟಿ , ಶಂಕರ್ ಕುಂದರ್, ದಿನಕರ್ ಹೇರೂರು, ನವೀನ್‌ಚಂದ್ರ ಸುವರ್ಣ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಪ್ರದೀಪ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಕಿಣಿ ಸ್ವಾಗತಿಸಿ, ಅಣ್ಣಯ್ಯ ಶೇರಿಗಾರ್ ಧನ್ಯವಾದವಿತ್ತು. ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.