ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ -ಪತ್ರಿಕಾ ವಿತರಕ ಮೃತ್ಯು
ಕುಂದಾಪುರ: ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಪತ್ರಿಕಾ ವಿತರಕರೋರ್ವರು ಮೃತಪಟ್ಟಿರುವ ಘಟನೆ ಗುಜ್ಜಾಡಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ಅಶೋಕ ಕೊಡಂಚ (75) ಅಪಘಾತದಲ್ಲಿ ಮೃತಪಟ್ಟವರು.
ಅವರು, ನಿನ್ನೆ (ಜ.13) ರಾತ್ರಿ ಗಂಗೊಳ್ಳಿ ಯಿಂದ ಗುಜ್ಜಾಡಿ ಕಡೆ ಹೋಗುತ್ತಿದ್ದ ಸಮಯದಲ್ಲಿ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಅತೀ ವೇಗವಾಗಿ ಸವಾರಿ ಮಾಡಿಕೊಂಡು ಬಂದ ಮೋಟಾರ್ ಸೈಕಲ್ ಸವಾರ, ಅಶೋಕ ಅವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದ ಅಶೋಕ ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.