ನಡು ರಸ್ತೆಯಲ್ಲೇ ಖಾಸಗಿ ಬಸ್ ಸಿಬ್ಬಂದಿಗಳ ಹೊಯಿಕೈ – ವಿಡಿಯೋ ವೈರಲ್, ಕೇಸ್ ದಾಖಲು
ಉಡುಪಿ: ಸಾಮಾನ್ಯವಾಗಿ ಬಸ್‌ಗಳಿಗೆ ತಮಗೆ ನಿರ್ಧರಿಸಿದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಲು ನಿಗದಿತ ಸಮಯ ಮೀಸಲಾಗಿರುತ್ತದೆ. ಆದರೆ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಬಸ್‌ಗಳ ಸಿಬ್ಬಂದಿಗಳ ನಡುವೆ ಆಗಾಗ ಗಲಾಟೆ, ಹೊಡೆದಾಟಗಳು ನಡೆಯುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಒಂದು ಘಟನೆ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್‌ಗಳಾದ ಕೊಹಿನೂರು ಎಕ್ಸ್ ಪ್ರೆಸ್ ಹಾಗೂ ಟಿಎಂಟಿ ತನ್ವೀರ್ ಬಸ್ ಸಿಬ್ಬಂದಿಗಳ ನಡುವೆ ಟೈಮಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಅಷ್ಟೇ ಅಲ್ಲದೆ ನಡು ರಸ್ತೆಯಲ್ಲೇ ರಾಡ್ ಹಿಡಿದು ಖಾಸಗಿ ಬಸ್ ನ ನಿರ್ವಾಹಕ ಗೂಂಡಾ ವರ್ತನೆ ತೋರಿದ್ದಾನೆ.
ಬಸ್‌ಗಳ ಟೈಮಿಂಗ್ ಪಾಲೋ ಮಾಡದ ಕಾರಣ ಹೆದ್ದಾರಿಯಲ್ಲಿ ಕೋಹಿನೂರು ಬಸ್ ಅಡ್ಡಗಟ್ಟಿದ ತನ್ವೀರ್ ಟಿಎಂಟಿ ಬಸ್ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್ ಕೋಹಿನೂರು ಬಸ್ ಚಾಲಕ ಸಫಿಯುಲ್ಲಾ ಮೇಲೆ ಹಲ್ಲೆಗೆ ಯತ್ನಿಸಿದ್ದು, ಎರಡೂ ಬಸ್‌ಗಳ ಸಿಬ್ಬಂಧಿಗಳು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದೀಗ ಎರಡೂ ಬಸ್‌ಗಳಲ್ಲಿ ಪ್ರಯಾಣಿಕರಿರುವಾಗಲೇ ಅಜಾಗರೂಕತೆಯಿಂದ ಬಸ್ ಚಲಾಯಿಸಿದಲ್ಲದೇ, ಅತೀ ವೇಗದಿಂದ ಬಸ್ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಗೂಂಡಾಗಿರಿ ತೋರಿದ್ದಾರೆ. ಸದ್ಯ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಎರಡು ಬಸ್ ನ ಚಾಲಕರು ದೂರು ದಾಖಲಾಗಿದ್ದು, ಕಾಪು ಪೊಲೀಸರು ಎರಡು ಬಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.