ಉಡುಪಿ: ಜೂ.21 ರವರೆಗೆ ಸೆಕ್ಷನ್ 144 ಜಾರಿ- ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ
ಉಡುಪಿ, ಜೂ13:(ಉಡುಪಿ ಟೈಮ್ಸ್ ವರದಿ) ರಾಜ್ಯದಲ್ಲಿ ಜೂ.21 ವರೆಗೆ ವಿಸ್ತರಿಸಿರುವ ಕೋವಿಡ್ ಲಾಕ್ ಡೌನ್ ನಿಯಮಗಳಲ್ಲಿ ಹೆಚ್ಚುವರಿ ಕಾರ್ಯ ಚಟುವಟಿಕೆಗೆ ಅವಕಾಶ ನೀಡಿ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ(ಕಂದಾಯ ಇಲಾಖೆ) ಮಂಜುನಾಥ ಪ್ರಸಾದ್ ಅವರು ಆದೇಶ ಹೊರಡಿಸಿದ್ದು ಅದರಂತೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ರಾಜ್ಯದಲ್ಲಿ “ಎಲ್ಲಾ ಉತ್ಪಾದನಾ ಘಟಕಗಳು /ಸ್ಥಾಪನೆ /ಕೈಗಾರಿಕೆಗಳು 50%ದಷ್ಟು ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಹಾಗೂ ಗಾರ್ಮೆಂಟ್ಸ್ ತಯಾರಿಕಾ ಘಟಕಗಳಿಗೆ 30 ಶೇ. ದಷ್ಟು ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ದಿನಸಿ ವಸ್ತು, ಆಹಾರ ಪದಾರ್ಥ, ಮೀನು, ಮಾಂಸ ಅಂಗಡಿಗಳು ಬೆಳಗ್ಗೆ 6 ರಿಂದ ಮದ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಯಾವ ಅಂಗಡಿಗೂ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಜೂನ್ 21ರವರೆಗೆ ಸೆಕ್ಷನ್144 ಜಾರಿ ಗೊಳಿಸಿ ಆದೇಶಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆಯ ಅವಧಿಯಲ್ಲಿ ರಿಕ್ಷಾ, ಟ್ಯಾಕ್ಸಿ ಗಳಲ್ಲಿ 2 ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ, ವಾಕಿಂಗ್, ಜಾಗಿಂಗ್ ಗೆ ಅವಕಾಶ, ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಪಾರ್ಕ್ ಒಪನ್, ಸಾಮಾಜಿಕ, ರಾಜಕೀಯ, ಸಭೆ ಸಮಾರಂಭಗಳಿಗೆ ಅನುಮತಿ ಇಲ್ಲ,
ಕಾರ್ಯಕ್ರಮ ನಡೆಸಿದರೆ ಕಠಿಣ ಕಾನೂನು ಕ್ರಮ, ಕೃಷಿ ಚಟುವಟಿಕೆಗಳಿಗೆ ಅವಕಾಶ, ಬೀದಿ ಬದಿ ವ್ಯಾಪಾರಕ್ಕೆ ಅವಕಾಶ, ಪಾನಿಪೂರಿ, ಫಾಸ್ಟ್ ಪುಡ್ ಅಂಗಡಿ ಗಳಿಗೆ ಅವಕಾಶ ಇಲ್ಲ, ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ಬುಕ್‌ಸ್ಟಾಲ್/ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳನ್ನುತೆರೆಯಲು ಜೂ.16 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಅವಕಾಶ ನೀಡಲಾಗಿದೆ.