ಪ್ರಜಾಪ್ರಭುತ್ವದ ಬುನಾದಿ ಕುಸಿಯುವ ಅಪಾಯದಲ್ಲಿದೆ: ಚಿಂತಕ ಡಾ.ಚಂದ್ರ ಪೂಜಾರಿ
ಉಡುಪಿ: ಸಮುದಾಯದ ನಡುವೆ ಸಹಭಾಳ್ವೆ ಇಲ್ಲದ ರಾಷ್ಟ್ರಗಳು ಜನಾಂಗೀಯ ದ್ವೇಷ, ಕಲಹ, ಅಭಿವೃದ್ಧಿಯಲ್ಲಿ ಹಿನ್ನಡೆ ಹೊಂದಿವೆ. ಸಹಭಾಳ್ವೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಚಿಂತಕ ಡಾ.ಚಂದ್ರಪೂಜಾರಿ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಶನಿವಾರ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ 5ರಷ್ಟು ಜನರ ಕೈನಲ್ಲಿ ಸಂಪತ್ತು ಕ್ರೋಢಿಕರಣಗೊಂಡಿದೆ. ಶೇ 70ಕ್ಕಿಂತ ಹೆಚ್ಚಿನ ಜನರು ಬಡತನದಲ್ಲಿ ಸಿಲುಕಿದ್ದಾರೆ. ಇಂತಹ ಅಸಮಾನತೆ ಹೋಗಲಾಡಿಸಲು ಸರ್ಕಾರಗಳು ಕಾಳಜಿ ತೋರುತ್ತಿಲ್ಲ ಎಂದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಮಾಧ್ಯಮಗಳಲ್ಲಿ ಹಸ್ತಕ್ಷೇಪ ಹೆಚ್ಚಾಗಿದ್ದು, ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಲಾಗಿದೆ. ಪ್ರಜಾಪ್ರಭುತ್ವದ ಬುನಾದಿ ಕುಸಿಯುವ ಅಪಾಯದಲ್ಲಿದೆ ಎಂದು ಡಾ. ಚಂದ್ರ ಪೂಜಾರಿ ಆತಂಕ ವ್ಯಕ್ತಪಡಿಸಿದರು. ಸಮುದಾಯಗಳ ನಡುವಿನ ದ್ವೇಷ ನಿಂತರೆ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ. ದೇವರು, ಧರ್ಮಗಳನ್ನು ಸೃಷ್ಟಿಸಿದ್ದು ಮನುಷ್ಯ ಎಂಬ ಸತ್ಯ ಅರಿತರೆ ಸಮಾಜ ಬದಲಾವಣೆಯ ಹಾದಿಯಲ್ಲಿ ಸಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಚಿಂತಕ ಜಿ.ರಾಜಶೇಖರ್ ‘ಮಾನವ ರತ್ನ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಮುಸ್ಲಿಂ ಸಮಾಜ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವಂತೆ ತೋರುತ್ತಿದ್ದು, ಖಾಸಗಿ ಹಾಗೂ ಸರ್ಕಾರಿ ರಂಗಗಳಲ್ಲಿ ಪ್ರಾತಿನಿಧ್ಯತೆ ಕಳೆದುಕೊಳ್ಳುತ್ತಿರುವುದು ಹಾಗೂ ಅಪಾಯಕಾರಿ ಮಟ್ಟ ತಲುಪುತ್ತಿರುವುದು ಆತಂಕಕಾರಿ ವಿಚಾರ’ ಎಂದರು.
ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರ ಸ್ಥಿತಿ ಸುಧಾರಿಸಲು ಜಾತ್ಯತೀತ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಎಲ್ಲ ವಾದ, ಸಿದ್ಧಾಂತಗಳು ಹಿನ್ನಲೆಗೆ ಸರಿದು ಅಂಬೇಡ್ಕರ್ ವಾದ ಮುನ್ನಲೆಗೆ ಬರಬೇಕು. ಅನ್ಯಾಯ, ಶೋಷಣೆ ವಿರುದ್ಧ ಪ್ರತಿಭಟಿಸುವ ಕ್ರಿಯಾಶೀಲ ಮನಸ್ಸುಗಳು ಹೆಚ್ಚಾಗಬೇಕು. ಹೋರಾಟಗಳಿಂದ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬ ಅತ್ಯವನ್ನು ಅರಿಯಬೇಕು’ ಎಂದರು.
ಎಂ.ಇಸ್ಮಾಯಿಲ್ ಹೂಡೆ ಅವರಿಗೆ ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಹರೇಕಳ ಹಾಜಬ್ಬ ಉದ್ಘಾಟಿಸಿದರು. ಇದೇ ವೇಳೆ ಫಾ.ವಿಲಿಯಂ ಮಾರ್ಟಿಸ್, ಬನ್ನಂಜೆ ಬಾಬು ಅಮೀನ್, ಸಾಧು ಸಾಲಿಯಾನ್, ವಿಠಲ್‌ದಾಸ್ ಬನ್ನಂಜೆ, ಹಾಜಿ ಅಬ್ದುಲ್ಲ ಪರ್ಕಳ, ವಿಶುಶೆಟ್ಟಿ ಅಂಬಲಪಾಡಿ, ಆಯಿಶಾ ಕಾರ್ಕಳ, ಶಶಿಕಲಾ ಬೆಂಜಮಿನ್ ಕೋಟ್ಯಾನ್, ಲಕ್ಷ್ಮೀಬಾಯಿ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಯಾಸಿನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮುಖಂಡರಾದ ಅಮೃತ್ ಶೆಣೈ, ಅಬ್ದುಸ್ಸಲಾಮ್ ಪುತ್ತಿಗೆ, ರಾಜು ಪೂಜಾರಿ ವೇದಿಕೆಯಲ್ಲಿದ್ದರು.