ತೈಲ ಬೆಲೆ ಏರಿಕೆ ಬಿಸಿ, ದಿನ ಬಳಕೆ ಸಾಮಗ್ರಿಗಳ ಬೆಲೆ ಏರಿಕೆ – ಜನಸಾಮಾನ್ಯ ತತ್ತರ

ಉಡುಪಿ: ಕೊರೋನಾ ಮಹಾಮಾರಿ 2020 ರ ಆರಂಭದಲ್ಲಿ ಒಕ್ಕರಿಸಿ ದೇಶದ ಆರ್ಥಿಕ ಚಟುವಟಿಕೆಗಳನ್ನು ಬುಡಮೇಲು ಮಾಡಿತ್ತು. ಇದು ಸಾಲದೆಂಬಂತೆ ಆ ಬಳಿಕ ದಿನ ಬಳಿಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ ಇದೀಗ ಸತತವಾಗಿ ಇಂಧನಗಳ ಮೇಲಿನ ಬೆಲೆ ಏರಿಕೆ ಗಗನಕ್ಕೇರಿರುವುದು ಜನ ಸಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಹಲವು ದಿನಗಳಿಂದ ಒಂದೇ ಸಮನೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ತೈಲೋತ್ಪನ್ನಗಳ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ದಿನದಿಂದ ದಿನಕ್ಕೆ ಪೆಟ್ರೋಲ್ ದರ ದಾಖಲೆಯಲ್ಲಿ ಏರಿಕೆಯಾಗುತ್ತಿದೆ. 

ಸಾಮಾನ್ಯವಾಗಿ ಕಚ್ಚಾ ತೈಲದ ಬೆಲೆ ಇಳಿಕೆ ಆದ ಕೂಡಲೇ ಪೆಟ್ರೋಲ್ ಡೀಸೆಲ್ ಬೆಲೆ ಕೂಡಾ ಇಳಿಕೆ ಆಗತ್ತೆ ಅನ್ನೋದು ಹಲವರ ನಿರೀಕ್ಷೆ ಆದ್ರೆ ಸರಕಾರ ಇಂಧನಗಳ ಮೇಲೆ ವಿಧಿಸುವ ತೆರಿಗೆ ಇನ್ನಷ್ಟು ಹೆಚ್ಚು ಮಾಡಿದ್ದರ ಪರಿಣಾಮ ಗ್ರಾಹಕರ ಕೈಗೆ ಸಿಗುವ ಪೆಟ್ರೋಲ್‌ನ ಬೆಲೆ ಏರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿದಿನ ಪರಿಷ್ಕರಣೆಗೊಳ್ಳುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕಚ್ಚಾ ತೈಲದ ಬೆಲೆ ಹಾಗೂ ವಿದೇಶಿ ವಿನಿಮಯ ದರವನ್ನು ಪರಿಗಣಿಸಿ ಈ ದರ ಬದಲಾಗುತ್ತಿರುತ್ತದೆ. ಇದೀಗ ಜಾಗತಿಕ ಕಚ್ಚಾ ತೈಲದ ಬೆಲೆ ಹೆಚ್ಚಳವಾಗುತ್ತಿದ್ದಂತೆ ಪೆಟ್ರೊಲ್ ಮತ್ತು ಡೀಸೆಲ್ ದರವನ್ನು ಕಂಪನಿಗಳು ಏರಿಕೆ ಮಾಡುತ್ತಿವೆ. ಅದರಂತೆ ಇಂದು ರಾಜ್ಯದಲ್ಲಿ ಪ್ರತೀ ಲೀ. ಪೆಟ್ರೋಲ್‌ಗೆ 86.63 ರೂಪಾಯಿ ಆಗಿದೆ. ರಾಜ್ಯದಲ್ಲಿ ಜ. 5 ಹೊತ್ತಿಗೆ 86.1 ರೂ. ಇದ್ದ ಪೆಟ್ರೋಲ್ ಬೆಲೆ  ಇಂದು(ಜ.9) 86.63 ರೂಪಾಯಿಯತ್ತ ದಾಪುಗಾಲು ಇಟ್ಟಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ವರ್ಷದ ಆರಂಭದಲ್ಲಿ ಪ್ರತಿ ಲೀ.ಗೆ  86.38 ಇದ್ದಂತಹ ಪೆಟ್ರೋಲ್ ಬೆಲೆ ಇಂದು (ಜ.9)  86.67 ರೂಪಾಯಿಯತ್ತ ಜಿಗಿದಿದೆ. 

ಪೆಟ್ರೋಲಿಯಂ ಉತ್ಪನ್ನಗಳನ್ನು ಏಕ ರೂಪದ ತೆರಿಗೆಯಾದ ಜಿಎಸ್‌ಟಿಗೆ ಒಳ ಪಡಿಸುವ ಮೂಲಕ ಇಂಧನಗಳಿಗೆ ಹೊರಿಸುವ ತೆರೆಗೆಯ ಭಾರವನ್ನು ಕಡಿಮೆ ಮಾಡಬಹುದು. ಆದರೆ ಜಿಎಸ್‌ಟಿ ಆರಂಭದಲ್ಲಿ ದೇಶದ ಹಲವು ರಾಜ್ಯಗಳು  ಪೆಟ್ರೋಲಿಯಂ ಉತ್ಪನ್ನಗಳನ್ನು  ಜಿಎಸ್‌ಟಿಗೆ ಒಳಪಡಿಸದಂತೆ ಪಟ್ಟು ಹಿಡಿದಿದ್ದರ ಪರಿಣಾಮ ಇಂದು ಪೆಟ್ರೋಲ್ ಜಿಎಸ್‌ಟಿ ಯಿಂದ ಹೊರಗುಳಿದಿದೆ. ಇನ್ನು ರಾಜ್ಯ ಸರಕಾರದ ಬೊಕ್ಕಸಕ್ಕೆ ಪೆಟ್ರೋಲಿಯಂ ಉತ್ಪನ್ನಗಳಿಂದ ಸಾಕಷ್ಟು ಮೊತ್ತದ ತೆರಿಗೆ ಹಣ ಸೇರುತ್ತದೆ. ಇದೇ ಕಾರಣಕ್ಕೆ  ಪೆಟ್ರೋಲ್‌ನ್ನು ಜಿಎಸ್‌ಟಿ ಯಿಂದ ಹೊರಗಿಡುವಂತೆ ರಾಜ್ಯಗಳು ಒತ್ತಾಯಿಸಿದ್ದು. ಆದರೆ ಕೇಂದ್ರದ ತೆರಿಗೆ ಹಾಗೂ ರಾಜ್ಯ ಸರಕಾರಗಳು ಇಂಧನಗಳ ಮೇಲೆ ವಿಧಿಸುತ್ತಿರುವ ಮೌಲ್ಯವರ್ಧಿತ ತೆರಿಗೆಯಿಂದ ಜನ ಸಾಮಾನ್ಯರ ಜೇಬು ಸುಡುತ್ತಿದೆ. 

ಒಂದೆಡೆ ಕೊರೋನಾ ಹಾವಳಿಯಿಂದ ಅನೇಕ ಮಂದಿ ಕೆಲಸ ಕಳೆದುಕೊಂಡಿದ್ದು ಎಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಇನ್ನೂ ಕೆಲವೆಡೆ ಉದ್ಯೋಗ ಇದ್ದರೂ ಸರಿಯಾದ ವೇತನ ಕೈ ಸೇರುತ್ತಿಲ್ಲ. ಹೀಗಿರುವಾಗ ನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ ದಿನ ಬಳಕೆಯ ವಸ್ತುಗಳು, ದಿನಸೀ ಸಾಮಾಗ್ರಿಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸುವಂತಾಗಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇದರೊಂದಿಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿರುವುದು ಮತ್ತಷ್ಟು ಹೊಡೆತ ಬಿದ್ದಂತಾಗಿದೆ. 

ಯಾವುದೇ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ತತ್ತರಿಸಿದಾಗ ಅದನ್ನು ಸುಧಾರಿಸುವ ಸಲುವಾಗಿ ತೆರಿಗೆ ಹಣ ಹೆಚ್ಚಳವಾಗುವುದು ಸಾಮಾನ್ಯ, ಈ ರೀತಿ ಸಂಗ್ರಹವಾದ ತೆರಿಗೆ ಹಣದಿಂದ ದೇಶ ಹಾಗೂ ರಾಜ್ಯದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಆಗುತ್ತದೆ ಎಂಬೂದೂ ಅಷ್ಟೇ ಸತ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ಕಷ್ಟಕರವಾಗಿರುವ ಇಂತಹ ಸಮಯದಲ್ಲಿ ಪೆಟ್ರೋಲ್ ಬೆಲೆ ಏರುತ್ತಿರುವುದು ಜನಸಮಾನ್ಯರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.

Leave a Reply

Your email address will not be published. Required fields are marked *

error: Content is protected !!