ಮಾಜಿ ನ್ಯಾಯಾಧೀಶೆಯಿಂದ 8.8 ಕೋಟಿ ರೂ. ಪಡೆದಿದ್ದ ಯುವರಾಜ್ ಸ್ವಾಮಿ!
ಬೆಂಗಳೂರು: ಗವರ್ನರ್ ಆಗಲು ಬಯಸಿದ್ದ ನಿವೃತ್ತ ನ್ಯಾಯಾಧೀಶೆಯೊಬ್ಬರು ಬರೋಬ್ಬರಿ 8.8 ಕೋಟಿ ರೂಪಾಯಿಯನ್ನು ಯುವರಾಜ್ ಸ್ವಾಮಿಗೆ ನೀಡಿದ್ದರು ಎಂದು ತನಿಖೆಯಿಂದ ಮಾಹಿತಿ ಹೊರಬಿದ್ದಿದೆ
ಯುವರಾಜ್ ಗೆ ಹಣ ನೀಡಿರುವ ಬಗ್ಗೆ ಡಿ. 21ರಂದು ನಿವೃತ್ತ ಮಹಿಳಾ ನ್ಯಾಯಾಧೀಶರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕೇಂದ್ರ ಸರ್ಕಾರದೊಂದಿಗೆ ಸಾಕಷ್ಟು ಸಂಪರ್ಕ ಹೊಂದಿದ್ದರಿಂದ ನ್ಯಾಯಾಧೀಶರನ್ನು ರಾಜ್ಯಪಾಲರನ್ನಾಗಿ ನೇಮಿಸಲು ಸಹಾಯ ಮಾಡುವುದಾಗಿ ಸ್ವಾಮಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆತನನ್ನು ನಂಬಿ ಹಲವು ಕಂತುಗಳಲ್ಲಿ ಹಣ ನೀಡಿರುವುದಾಗಿ ನ್ಯಾಯಧೀಶೆ ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗವರ್ನರ್ ಹುದ್ದೆ ಆಕಾಂಕ್ಷಿಯಾಗಿದ್ದ ನಿವೃತ್ತ ನ್ಯಾಯಾಧೀಶೆ ಅವರಿಗೆ ಪೊಲೀಸ್ ಅಧಿಕಾರಿಯೊಬ್ಬರು ಯುವರಾಜ್ ಸ್ವಾಮಿಗೆ ಪರಿಚಯ ಮಾಡಿಸಿದ್ದರು. ಅಲ್ಲದೆ ಈ ಕೆಲಸಕ್ಕಾಗಿ ಪೊಲೀಸ್ ಅಧಿಕಾರಿ ಸ್ವಾಮಿಯಿಂದ ಬರೋಬ್ಬರಿ 2.75 ಕೋಟಿ ರುಪಾಯಿ ಪಡೆದಿದ್ದರು. ಹೀಗಾಗಿ ಸದ್ಯ ಪೊಲೀಸ್ ಅಧಿಕಾರಿ ಯಾರೆಂದು ಸಿಸಿಬಿ ತಲೆಕೆಡಿಸಿಕೊಂಡಿದೆ.
ನಾಗರಬಾವಿ ನಿವಾಸಿ 52 ವರ್ಷದ ಯುವರಾಜ್ ಸ್ವಾಮಿ ಜ್ಯೋತಿಷಿ ಮತ್ತು ವಾಸ್ತು ತಜ್ಞ ಎಂದು ಹೇಳಿಕೊಂಡಿದ್ದು, ಅನೇಕ ಕನ್ನಡ ಚಲನಚಿತ್ರ ನಟರು ಮತ್ತು ಹಿರಿಯ ರಾಜಕಾರಣಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಡಿ. 16ರಂದು ಆತನನ್ನು ಸಿಸಿಬಿ ಬಂಧಿಸಿತ್ತು.
ಏತನ್ಮಧ್ಯೆ, ಬಿಜೆಪಿ ಮುಖಂಡರಾದ ವಿ ಸೋಮಣ್ಣ, ಲಕ್ಷ್ಮಣ ಸವದಿ ಮತ್ತು ಇತರರೊಂದಿಗೆ ಸ್ವಾಮಿ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಯುವರಾಜ್ ನನ್ನು ಬಂಧಿಸಿದಾಗ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರೊಂದಿಗೆ ತೆಗೆದ ಹಲವಾರು ಫೋಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.