ಜ.12: ಉಡುಪಿಯಲ್ಲಿ ಜಿಲ್ಲಾ ಮಟ್ಟದ ಜನ ಸೇವಕ ಸಮಾವೇಶ
ಉಡುಪಿ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸ್ಪರ್ಧಿಸಿರುವ 2,351 ಅಭ್ಯರ್ಥಿಗಳಲ್ಲಿ 1,495 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಜಿಲ್ಲೆಯ 153 ಗ್ರಾಮ ಪಂಚಾಯತ್ಗಳಿಗೆ ನಡೆದ ಚುನಾವಣೆಯಲ್ಲಿ115 ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಜಿಲ್ಲೆಯಾದ್ಯಂತ 63% ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆಯಾಗಿದ್ದು, 75%ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಭರ್ಜರಿ ವಿಜಯ ದಾಖಲಿಸಿದೆ. ಗ್ರಾಮ ಪಂಚಾಯತ್ ಚುನಾವಣೆಯ ಈ ಪ್ರಚಂಡ ಗೆಲುವು ಮುಂದಿನ ಎಲ್ಲಾ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಅವರು ಜ.9ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಮುಂಬರಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಜನ ಸೇವಕ ಸಮಾವೇಶ ಜನವರಿ 12 ಮಂಗಳವಾರ ಬೆಳಿಗ್ಗೆ 10.30ಕ್ಕೆ ಉಡುಪಿಯ ಪುತ್ತೂರು-ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಜಿಲ್ಲಾ ಜನ ಸೇವಕ ಸಮಾವೇಶವು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಗೆ ಜನಸೇವಕ ಸಮಾವೇಶ ಅಭಿನಂದನೆ ಸಲ್ಲಿಸಲಿದೆ. ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜನಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ಈರಣ್ಣ ಕಡಾಡಿ ಸಹಿತ ಜಿಲ್ಲೆಯ ಸಂಸದರು, ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರ ಸಮಾಗಮದೊಂದಿಗೆ ಜನ ಸೇವಕ ಸಮಾವೇಶ ಸಂಪನ್ನಗೊಳ್ಳಲಿದೆ. ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ನಿಗಮ-ಮಂಡಳಿ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ಹಾಗೂ ನೂತನ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಈ ಜನ ಸೇವಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪ್ರಿಯ ಜನಪರ ಯೋಜನೆಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಪರ ಆಡಳಿತ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದ ಸದೃಢ ಪಕ್ಷ ಸಂಘಟನೆ ಹಾಗೂ ಜಿಲ್ಲೆಯಾದ್ಯಂತ ನಡೆಯುತ್ತಿರುವ ದಾಖಲೆಯ ಅಭಿವೃದ್ಧಿ ಕೆಲಸ ಕಾರ್ಯಗಳು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ. ಪಕ್ಷದ ವಿನೂತನ ಕಾರ್ಯಕ್ರಮಗಳಾದ ಪಂಚರತ್ನ ಸಮಿತಿ, ಪೇಜ್ ಪ್ರಮುಖ್, ಕುಟುಂಬ ಮಿಲನ ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶಗಳು ಗ್ರಾಮ ಪಂಚಾಯತ್ ಚುನಾವಣಾ ಗೆಲುವಿಗೆ ಪೂರಕ ವಾತಾವರಣ ಸೃಷ್ಠಿಸಿವೆ. ರಾಜ್ಯಾದ್ಯಂತ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಜಯಭೇರಿಗಳಿಸಿರುವ ಪ್ರಸಕ್ತ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದಿಂದ ಬಿಜೆಪಿಯ ಪಕ್ಷ ಸಂಘಟನೆ ಮತ್ತು ಜನಪರ ಆಡಳಿತಕ್ಕೆ ಜನತೆಯ ಅದಮ್ಯ ವಿಶ್ವಾಸ ಮಗದೊಮ್ಮೆ ಸಾಬೀತಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ವಿಜಯ ದಾಖಲಿಸಿರುವ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಸಹಿತ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಮತ್ತು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಮತದಾರ ಬಂಧುಗಳು ಅಭಿನಂದನಾರ್ಹರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಚಂಡ ಗೆಲುವಿಗೆ ಬದ್ಧತೆಯಿಂದ ಶ್ರಮಿಸಿರುವ ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳಿಗೆ ಹಾಗೂ ಪಕ್ಷದ ಮುಖಂಡರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಜಿಲ್ಲಾ ಬಿಜೆಪಿ ವಂದನೆಯನ್ನು ಸಲ್ಲಿಸುತ್ತದೆ. ಜನ ಸೇವಕ ಸಮಾವೇಶವನ್ನು ಯಶಸ್ವಿಗೊಳಿಸುವ ಜೊತೆಗೆ ಮುಂಬರಲಿರುವ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲೆಯಾದ್ಯಂತ ಬಿಜೆಪಿ ವಿಜಯ ಯಾತ್ರೆಯನ್ನು ಮುಂದುವರಿಸಲು ಎಲ್ಲರೂ ಕೈಜೋಡಿಸುವಂತೆ ಕುಯಿಲಾಡಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಉಪಸ್ಥಿತರಿದ್ದರು.