ಹೊಸವರ್ಷ ಆಚರಣೆ – ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ ಕ್ಷಮೆಗೆ ಮುತಾಲಿಕ್ ಆಗ್ರಹ

ಬೆಳಗಾವಿ: ಜ.1ರಂದು ದೇವಸ್ಥಾನಕ್ಕೆ ದೀಪಾಲಂಕಾರ ಮಾಡಿ ಹೊಸ ವರ್ಷ ಆಚರಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಡಿ. ಹೆಗ್ಗಡೆ ಹಾಗೂ ಬೆಂಗಳೂರಿನ ಇಸ್ಕಾನ್‌ನವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಆಗ್ರಹಿಸಿದರು.

ಹಿಂದೂಗಳ ಧಾರ್ಮಿಕ ಸ್ಥಳ ಧರ್ಮಸ್ಥಳ ಮಂಜುನಾಥ ದೇವಾಲಯ ಮತ್ತು ಕೃಷ್ಣನ ದೇವಸ್ಥಾನವಾದ ಇಸ್ಕಾನ್‌ನಲ್ಲಿ ನಮ್ಮದಲ್ಲದ ಸಂಸ್ಕೃತಿಯ ಆಚರಣೆ ಮಾಡಿರುವುದು ನೋವಿನ ಸಂಗತಿಯಾಗಿದೆ. ಅವರ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ಕ್ಷಮೆ ಕೋರದಿದ್ದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಶನಿವಾರ ತಿಳಿಸಿದರು.

ಹಿಂದೂ ದೇವರನ್ನು ಆರಾಧಿಸುವ ದೇವಸ್ಥಾನದಲ್ಲಿ ಕ್ರೈಸ್ತ ಧರ್ಮದ ಆಚರಣೆ ನಡೆಸುತ್ತೀರಾ?. ಒಂದೆಡೆ ನಾವು ಮತಾಂತರದ ವಿರೋಧ ಮಾಡುತ್ತಿದ್ದೇವೆ. ಮತಾಂತರ ಪ್ರಕ್ರಿಯೆಯನ್ನು ಕಾಯ್ದೆ ಮೂಲಕ ತಡೆಯುವ ಪ್ರಕ್ರಿಯೆಯೂ ರಾಜ್ಯದಲ್ಲಿ ನಡೆಯುತ್ತಿದೆ. ಹೀಗಿರುವಾಗ, ಧರ್ಮ ವಿರೋಧಿಯಾಗಿ ನಡೆದುಕೊಂಡರೆ ಹೇಗೆ? ಎಂದು ಕೇಳಿದರು.

‘ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಎಂಥದೋ ವೇಷವನ್ನೇ ಧರಿಸಿ ಹೊಸ ವರ್ಷ ಆಚರಿಸಿದ್ದಾರೆ. ಅವರಿಗೆ ನಾಚಿಕೆ, ಮಾನ–ಮರ್ಯಾದೆ ಇದೆಯೇ’ ಎಂದು ಪ್ರಶ್ನಿಸಿದರು.

‘ದೇವಾಲಯಗಳಲ್ಲಿ ಹೊಸ ವರ್ಷಾಚರಣೆಯು, ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಪ್ರೇರಣೆ ಕೊಟ್ಟಂತಾಗುತ್ತದೆ. ಹೀಗೆ ಆಚರಿಸಿದ ಫೋಟೊಗಳನ್ನೇ ಹಿಡಿದುಕೊಂಡು ಪಾದ್ರಿಗಳು ಮತಾಂತರಕ್ಕೆ ಹೋಗುತ್ತಿದ್ದಾರೆ’ ಎಂದರು.

ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಅದರಲ್ಲಿ ಕೆಲ ಲೋಪಗಳೂ ಇವೆ. ಕಸಾಯಿಖಾನೆಗಳ ಬಗ್ಗೆ ಉಲ್ಲೇಖವಿಲ್ಲ. 13 ವರ್ಷದ ಮೇಲಿನ ಗೋವುಗಳ ಹತ್ಯೆಗೆ ಅವಕಾಶ ನೀಡಲಾಗಿದೆ. ಇದು ಸರಿಯಲ್ಲ. ಸಂಪೂರ್ಣವಾಗಿ ನಿಷೇಧವಾಗಬೇಕು. ರಫ್ತು ಕೂಡ ನಿಷೇಧಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಬಂದೋಬಸ್ತ್‌ ಕೈಗೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಕೇಳಿದ್ದೇನೆ. ಟಿಕೆಟ್ ಸಿಗದಿದ್ದರೆ ಸ್ಪರ್ಧಿಸುವುದಿಲ್ಲ. ಇಲ್ಲಿಗೆ ಜ. 17ರಂದು ಬರಲಿರುವ ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮೂಲಕ ಭೇಟಿಯಾಗಲು ಯತ್ನಿಸುತ್ತಿದ್ದೇನೆ’ ಎಂದರು.

Leave a Reply

Your email address will not be published. Required fields are marked *

error: Content is protected !!