8ನೇ ಸುತ್ತಿನ ಮಾತುಕತೆ: ರೈತರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದ ಕೇಂದ್ರ

ನವದೆಹಲಿ: ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಶಮನಕ್ಕೆ ಸರ್ಕಾರ ಇಂದು 8ನೇ ಸುತ್ತಿನ ಮಾತುಕತೆ ನಡೆಸುತ್ತಿದ್ದು, ಸಭೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೇಂದ್ರ ಸರ್ಕಾರ ರೈತರ ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತಂತೆ ಮಾತನಾಡಿದ ಕೇಂದ್ರ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು,  ಇಂದಿನ ಸಭೆಯಲ್ಲಿ ನಿರ್ಣಯ ಹೊರಬರುವ ವಿಶ್ವಾಸವಿದೆ. ರೈತರ ಮುಷ್ಕರ ಅಂತ್ಯ ಮಾಡುವ ಸಂಬಂಧ ಈ ಸಭೆ ನಡೆಸಲಿದ್ದೇವೆ. ಮೊದಲ ಸಭೆಯಲ್ಲಿ ನಡೆದ ಎಲ್ಲ ಅಂಶಗಳ ಕುರಿತೂ ಇಲ್ಲಿ ಚರ್ಚೆ ನಡೆಸುತ್ತೇವೆ. ಮೊದಲಸಭೆಯಲ್ಲಿ ರೈತರು ಕೃಷಿ ಕಾನೂನುಗಳ ಹಿಂಪಡೆಯುವಿಕೆ ಕುರಿತು ಆಗ್ರಹಿಸಿರಲಿಲ್ಲ. ಆದರೆ ಆ ಬಳಿಕ ಕೆಲ ರಾಜಕೀಯ ಏಜೆಂಟರ ಮಧ್ಯ ಪ್ರವೇಶದಿಂದಾಗಿ ರೈತರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ. ಮುಂದೆ ಕೀಟನಾಶಕ (ನಿರ್ವಹಣೆ) ಮಸೂದೆ ಮತ್ತು ಬೀಜ ಮಸೂದೆಗಳೂ ಕೂಡ ಬರಲಿದೆ. ಆಗಲೂ ರೈತರನ್ನು ದಾರಿ ತಪ್ಪಿಸುವ ಕಾರ್ಯವಾಗಬಹುದು. ಹೀಗಾಗಿ ಈ ಬಗ್ಗೆ ಸರ್ಕಾರ ಎಚ್ಚರಿಕೆಯಿಂದಿದೆ ಎಂದು ಹೇಳಿದರು.

ಇದೇ ವೇಳೆ ಪಂಜಾಬ್ ಧಾರ್ಮಿಕ ಮುಖಂಡರ ಜೊತೆಗಿನ ಸಭೆ ಕುರಿತು ಮಾತನಾಡಿದ ಸಚಿವರು, ನಾವು ಎಲ್ಲರನ್ನು ಸ್ವಾಗತಿಸುತ್ತೇವೆ. ನಮಗೆ ನಿರ್ಣಯಬೇಕು. ಅವರು ಆ ದಿಕ್ಕಿನಲ್ಲಿ ಮಾತನಾಡಲು ಸಿದ್ಧರಾಗಿದ್ದರೆ, ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. 

ಇತ್ತೀಚೆಗಷ್ಟೇ ಪಂಜಾಬ್ ರಾಜ್ಯದ ಖ್ಯಾತ ಧಾರ್ಮಿಕ ಮುಖಂಡರಾದ ನಾನಕ್ಸರ್ ಗುರುದ್ವಾರ ಮುಖ್ಯಸ್ಥ ಬಾಬಾ ಲಖಾ ಅವರು ಕೃಷಿ ಸಚಿವ ತೋಮರ್ ಅವರನ್ನು ಭೇಟಿಯಾಗಿ ಕೇಂದ್ರ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಮಧ್ಯಸ್ಥಿಕೆ ವಹಿಸಲು ಇಚ್ಛೆ ವ್ಯಕ್ತಪಡಿಸಿದ್ದರು. 

Leave a Reply

Your email address will not be published. Required fields are marked *

error: Content is protected !!