ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿದ ಪಂಚಾಯ್ ಸದಸ್ಯನ ಅನರ್ಹಗೊಳಿಸಲು ದಸಂಸ ಆಗ್ರಹ
ಉಡುಪಿ: ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿ 2020ರ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯಲ್ಲಿ ಹಾವಂಜೆ ಗ್ರಾಮ ಪಂಚಾಯ್ನ 2 ನೇ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿರುವ ಸದಸ್ಯ ಅಜಿತ್ ಕುಮಾರ್ ಪೂಜಾರಿ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಆಗ್ರಹಿಸಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಶೇಖರ ಹಾವಂಜೆ, ಅಜಿತ್ ಕುಮಾರ್ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮ ಪಂಚಾಯತ್ ನ ಮುಗ್ಗೇರಿ 2 ನೇ ಸಾಮಾನ್ಯ ಕ್ಷೇತ್ರದಲ್ಲಿ ಗ್ಯಾಸ್ ಚಿಹ್ನೆಯ ಮೂಲಕ ಚುನಾವಣೆ ಸ್ಪರ್ಧಿಸಿ ನೂತನವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿರುತ್ತಾರೆ. ಆದರೆ ಇವರು ಚುನಾವಣಾ ಸಲುವಾಗಿ ಸಲ್ಲಿಸಿರುವ ನಾಮಪತ್ರದಲ್ಲಿ ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಆರೋಪಿಸಿದೆ. ಕರ್ನಾಟಕ ಪಂಚಾಯತ್ ರಾಜ್ 1993 ಅಧಿನಿಯಮ 12ರ ಹೆಚ್ನಲ್ಲಿ ತಿಳಿಸಿರುವಂತೆ ಗ್ರಾಮ ಪಂಚಾಯತ್ ಆದೇಶದ ಮೂಲಕ ಮಾಡಿದ ಯಾವುದೇ ಕಾಮಗಾರಿಯಲ್ಲಿ ಅಥವಾ ಗ್ರಾಮ ಪಂಚಾಯತ್ ನೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಮಾಡಿಕೊಂಡ ಯಾವುದೇ ಕರಾರಿನಲ್ಲಿ ಹಾಗೂ ಉದ್ಯೋಗದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾಲು ಅಥವಾ ಹಿತಾಸಕ್ತಿಯನ್ನು ಹೊಂದಿದ್ದರೆ, ಗ್ರಾಮ ಪಂಚಾಯತ್ ಪರವಾಗಿ ಯಾವುದೇ ಅಂತಹ ಕಾಮಗಾರಿ ಅಥವಾ ಕರಾರನ್ನು ಹಾಗೂ ಗ್ರಾಮ ಪಂಚಾಯತ್ಗೆ ಸರಕು ಮತ್ತು ಸೇವೆಗಳನ್ನು ಪೂರೈಸುವುದಕ್ಕಾಗಿ ಯಾವುದೇ ಕರಾರನ್ನು ಪಡೆದುಕೊಳ್ಳುವಲ್ಲಿ ಯಾವುದೇ ವ್ಯಕ್ತಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತೊಡಗಿದ್ದಲ್ಲಿ ಅಂತಹ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದು ಅವರಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಸದ್ಯ ಹಾವಂಜೆ ಗ್ರಾಮ ಪಂಚಾಯತ್ನ ಸದ್ಯಸ್ಯರಾಗಿ ಆಯ್ಕೆ ಆಗಿರುವ ಅಜಿತ್ ಕುಮಾರ್ ಪೂಜಾರಿ ಅವರು ಹಾವಂಜೆ ಗ್ರಾಮ ಪಂಚಾಯತ್ನ ಕಟ್ಟಡದ ಡೋರ್ ನಂ 3-139 ಅಂಗಡಿ ಕೋಣೆಯನ್ನು ವ್ಯಾಪಾರದ ಉದ್ದೇಶಕ್ಕೆ ಬಳಸಲು 2020ರ ಅ. 16 ರಂದು ಪಂಚಾಯತ್ನ ಪರವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ 3 ವರ್ಷಗಳ ಅವಧಿಗೆ ಕರಾರು ಮಾಡಿಕೊಂಡಿರುತ್ತಾರೆ. ಈ ವಿಚಾರವನ್ನು ಮುಚ್ಚಿಟ್ಟು ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆ ಯಾಗಿರುರುತ್ತಾರೆ. ಆದ್ದರಿಂದ ತಪ್ಪು ಮಾಹಿತಿ ನೀಡಿ ಗೆದ್ದಿರುವುದರಿಂದ, ಇದು ಮುಂದಿನ ಸೇವಾ ಅವಧಿಯಲ್ಲಿ ಕೈಗೊಳ್ಳುವ ಇತರ ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಚುನಾವಣಾ ಅಧಿಕಾರಿ ಹಾಗೂ ಉಡುಪಿ ಜಿಲ್ಲಾಧಿಕಾರಿಯವರು ಅಜಿತ್ ಕುಮಾರ್ ಪೂಜಾರಿ ಅವರನ್ನು ಗ್ರಾಮ ಪಂಚಾಯತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಸಮಿತಿ ಆಗ್ರಹಿಸಿದೆ. |