ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಗೌರವಧನವನ್ನು ದ್ವಿಗುಣಗೊಳಿಸುವಂತೆ ಮನವಿ

ಉಡುಪಿ: ಕರ್ನಾಟಕ ರಾಜ್ಯದಲ್ಲಿ ವಿಶೇಷ ಶಾಲೆಗಳಲ್ಲಿ (ದಿವ್ಯಾಂಗ ಮಕ್ಕಳಿಗಾಗಿ) ಕಾರ್ಯಾನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಗೌರವಧನವನ್ನು ದ್ವಿಗುಣಗೊಳಿಸುವ ಕುರಿತು ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಉಡುಪಿ ಜಿಲ್ಲಾ ಘಟಕ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘ ಮತ್ತುಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ 2015ರಿಂದ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸಬೇಕೆಂಬ ಮನವಿಯನ್ನು  ಮುಖ್ಯ ಮಂತ್ರಿ, ಇಲಾಖಾ ಸಚಿವರು, ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕರಿಗೆ ನೀಡಲಾಗಿದೆ. 

ಪ್ರಸ್ತುತ ವಿಶೇಷ ಶಾಲೆಯಲ್ಲಿ ದುಡಿಯುತ್ತಿರುವ ವಿಶೇಷ ಶಿಕ್ಷಕರಿಗೆ ಬರೇ 13,500/-ಗಳು ಲಭಿಸುತ್ತಿದೆ. ಕೇಂದ್ರ ಸರಕಾರ ಘೋಷಿಸಿರುವಂತಹ ಕನಿಷ್ಠ ವೇತನ  ವಿಶೇಷ ಶಿಕ್ಷಕ ಶಿಕ್ಷಕೇತರರಿಗೆ ಸಿಗುತ್ತಿಲ್ಲ. ಇದರೊಂದಿಗೆ 2013-14 ರಿಂದ ಗೌರವಧನ ಪರಿಷ್ಕರಣೆಯೂ ಆಗಿರುವುದಿಲ್ಲ. ಆದ್ದರಿಂದ ವಿಕಲ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ವಿಶೇಷ ಶಾಲೆಗಳಲ್ಲಿ ಶ್ರಮಿಸುತ್ತಿರುವ ವಿಶೇಷ ಶಿಕ್ಷಕ ಮತ್ತು ಶಿಕ್ಷಕೇತರರ ಗೌರವಧನವನ್ನು ದ್ವಿಗುಣಗೊಳಿಸಬೇಕೆಂಬ ಘಟಕದ  ಬೇಡಿಕೆಗೆ ಸ್ಪಂದಿಸಿ, ಈ ವರ್ಷದ ಬಜೆಟ್‌ನಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರರ ‌ಗೌರವಧನ ದ್ವಿಗುಣಗೊಳಿಸುವ ವಿಷಯವನ್ನು ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಸರಕಾರಕ್ಕೆ ಪ್ರಸ್ತಾಪಿಸುವಂತೆ ಘಟಕ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!