ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಡೆಯುತ್ತಿದೆ ಭಾರೀ ಪೈಪೋಟಿ
ಉಡುಪಿ:(ಉಡುಪಿ ಟೈಮ್ಸ್ ವರದಿ) ಜಿಲ್ಲಾ ಯೂತ್ ಕಾಂಗ್ರೆಸ್ ನಲ್ಲೀಗ ಅಧ್ಯಕ್ಷ ಗಿರಿಯ ಚುನಾವಣೆಯ ರಂಗು ಕಳೆಗಟ್ಟಿದೆ. ಈ ಬಾರಿಯ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಜಿಲ್ಲೆಯ ಯುವ ಕಾಂಗ್ರೆಸ್ ಹೊಸ ಮುಖಗಳಿಗೆ ಮಣೆಹಾಕಲು ಪಕ್ಷದ ಯುವ ಸಮುದಾಯ ಒಲವು ತೋರಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷಗಿರಿಯ ಚುನಾವಣಾ ಅಂಗಳದಲ್ಲಿ ಐವರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ದೀಪಕ್ ಕೋಟ್ಯಾನ್ , ಜಿಲ್ಲಾ ಯೂತ್ ಕಾಂಗ್ರೆಸ್ ನ ಹಾಲಿ ಅಧ್ಯಕ್ಷರಾಗಿರುವ ವಿಶ್ವಾಸ್ ಅಮೀನ್, ಜಿಲ್ಲಾ ಸಾಮಾಜಿಕ ಜಾಲತಾಣದ ಪ್ರದೀಪ್ ಶೆಟ್ಟಿ ನಲ್ಲೂರು, ಕಾರ್ಕಳ ಬ್ಲಾಕ್ ನ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಹಾಗೂ ಕುಂದಾಪುರದ ಮಹಮ್ಮದ್ ಸಲಾಮ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ದೀಪಕ್ ಕೋಟ್ಯಾನ್ ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಈ ಭಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನಾ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮದೇ ಆದ ಯುವಕರ ತಂಡವನ್ನು ರಚಿಸಿಕೊಂಡು ಕೋವಿಡ್ ಸಂಕಷ್ಟದ ಸಮಯದಲ್ಲಿ ಆಹಾರ ವಿತರಣೆ, ಬಡ ರೋಗಿಗಳಿಗೆ ಸಹಾಯ ಹಸ್ತ ಚಾಚಿದವರು ಇವರು. ಇಷ್ಟೇ ಅಲ್ಲದೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನೂ ನೀಡುತ್ತಾ ಯುವ ನಾಯಕನಾಗಿ ಹೊರ ಹೊಮ್ಮಿದ್ದಾರೆ. ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ನ ಹಾಲಿ ಅಧ್ಯಕ್ಷರಾಗಿರುವ ವಿಶ್ವಾಸ್ ಅಮೀನ್ ಅವರೂ ಈ ಬಾರಿ ಮತ್ತೆ ಅಧ್ಯಕ್ಷೀಯ ಸ್ಥಾನಕ್ಕೆ ಪುನರಾಯ್ಕೆ ಬಯಸಿದ್ದಾರೆ. ಉಡುಪಿ ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರದಲ್ಲಿ ಐವರೂ ಬಿಜೆಪಿ ಶಾಸಕರು ಇದ್ದರೂ ಲಾಕ್ಡೌನ್ ಅವಧಿಯಲ್ಲಿ ಅಕ್ರಮ ಮರಳು ಸಾಗಾಟದ ವಿರುದ್ಧ ಧ್ವನಿ ಎತ್ತಿದ್ದು ಮಾತ್ರವಲ್ಲದೆ ಅಕ್ರಮ ಮರಳುಗಾರಿಕೆ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರು. ಇದರೊಂದಿಗೆ ಜಿಲ್ಲೆಯಲ್ಲಿ ನಡೆಯುವ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಕಾರ್ಯನಿರ್ವಹಣೆಯಲ್ಲಿ ಸಕ್ರಿಯರಾಗಿರುವ ಪ್ರದೀಪ್ ಶೆಟ್ಟಿ ನಲ್ಲೂರು ಅವರೂ ಈ ಬಾರಿಯ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇವರು ಸಾಮಾಜಿಕ ಜಾಲ ತಾಣದ ಮೂಲಕ ಪಕ್ಷ ಸಂಘಟನೆ ಹಾಗೂ ಪಕ್ಷದ ಕಾರ್ಯಕ್ರಮ ಗಳನ್ನು ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಕಾರ್ಕಳ ಬ್ಲಾಕ್ ನ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಹಾಗೂ ಕುಂದಾಪುರ ದ ಮಹಮ್ಮದ್ ಸಲಾಮ್ ಸ್ಪರ್ಧಿಸುತ್ತಿದ್ದು ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಐವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಯುತ್ತಿದ್ದು ಚುನಾವಣೆ ಗೆದ್ದು ಯಾರು ಜಿಲ್ಲಾ ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಸಿಂಹಾಸನ ಏರಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ. ಐವೈಸಿ ಆ್ಯಪ್ ಮೂಲಕ ಜ. 12 ರಂದು ಆನ್ಲೈನ್ ನಲ್ಲಿ ಚುನಾವಣೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ 3,556 ಮತದಾರಿದ್ದಾರೆ. |