ಮಣಿಪಾಲ: ಹೊಸಬೆಳಕು ಆಶ್ರಮದಲ್ಲಿ ಗೌರಿಗೆ ಸೀಮಂತದ ಸಂಭ್ರಮ!
ಮಣಿಪಾಲ,ಜ.6; ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿರುವ ಗೌರಿ ಹಸುವಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮವು, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಹೊಸಬೆಳಕು ಸೇವಾ ಟ್ರಸ್ಟ್ ಅವರ ಆಯೋಜನೆಯಲ್ಲಿ ಬುಧವಾರ ನಡೆಯಿತು. ಬಲು ಅಪರೂಪವಾಗಿ ನಡೆದಿರುವ, ಗೋವಿಗೆ ಬಯಕೆ ಇಡೆರಿಸುವ ಕಾರ್ಯಕ್ರಮವು ಗೋಪ್ರೇಮಕ್ಕೆ ಸಾಕ್ಷಿಯಾಯಿತು.
ಗೌರಿಯನ್ನು ಸ್ನಾನ ಮಾಡಿಸಿದ ಬಳಿಕ, ಅಲಂಕಾರಗೊಳಿಸಿದ ನಡಿಗೆ ಯಂತ್ರದ ಸಹಾಯದಿಂದ ಮಂಟಪಕ್ಕೆ ಕರೆತರಲಾಯಿತು. ಗೌರಿ ಹಸುವಿಗೆ ಹಸಿರು ಬಣ್ಣದ ಸೀರೆ ಉಡಿಸಲಾಯಿತು. ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳೊಂದಿಗೆ ಮಡಿಲು ತುಂಬಿಸಲಾಯಿತು. ಮೊಳಕೆ ಬರಿಸಿದ ನವಧಾನ್ಯಗಳು, ವಿಧ ಹಿಂಡಿಗಳು, ಹಾಗೂ ಬಯಕೆಯ ಖಾದ್ಯಗಳನ್ನು ಬಡಿಸಲಾಯಿತು. ಪಂಚ ಮುತೈದರು ಆರತಿ ಬೆಳಗಿದರು.
ಮಣಿಪಾಲ ಜಿಲ್ಲಾಡಳಿತ ರಜತಾದ್ರಿ ಕಛೇರಿ ಬಳಿ, ಕಳೆದ ಇಪ್ಪತ್ತು ದಿನಗಳ ಹಿಂದೆ, ಅಪಘಾತದಿಂದ ಗಂಭೀರ ಗಾಯಗೊಂಡಿರುವ ವಾರಸುದಾರರು ಇಲ್ಲದ ದನವೊಂದು ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿತು. ಸ್ಥಳಿಯ ರಿಕ್ಷಾ ಚಾಲಕರು ನೀಡಿರುವ ಮಾಹಿತಿ ಮೆರೆಗೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು, ಗೋವನ್ನು ರಕ್ಷಿಸಿ, ಹೊಸ ಬೆಳಕು ಆಶ್ರಮದಲ್ಲಿ ಆಶ್ರಯ ಒದಗಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ದನದ ಚಿಕಿತ್ಸೆ, ಆರೈಕೆಯನ್ನು ಆಶ್ರಮ ಸಂಚಾಲಕ ವಿನಯಚಂದ್ರ ಅವರು ಮಾಡಿದ್ದರು. ನಡೆಯಲಾಗದ ಸ್ಥಿತಿಯಲ್ಲಿದ್ದ ದನಕ್ಕೆ, ಜಾನುವಾರುಗಳಿಗೆ ವಿಶೇಷವಾಗಿ ತಯಾರಿಸಿದ ನಡಿಗೆ ಯಂತ್ರವನ್ನು ಬಳಿಸಿಕೊಂಡು ಅವರು ದನವನ್ನು ನಡೆದಾಡುವಂತೆ ಮಾಡಿದ್ದಾರೆ. ಆಶ್ರಮವಾಸಿಗಳ ಪ್ರೀತಿಗೆ ಒಳಗಾದ ಗೋವಿಗೆ ಗೌರಿ ಎಂದು ನಾಮಕರಣಗೊಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ. ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್, ವಿನಯಚಂದ್ರ ಆಚಾರ್ಯ, ಮಾಂಡವಿ ಆಟೋ ನಿಲ್ದಾಣದ ಚಾಲಕರು ಉಪಸ್ಥಿತರಿದ್ದರು. ಶ್ರೀಧರ್ ಭಟ್ ಅವರು ಫಲಹಾರ ಒದಗಿಸಿದರು. ಕಾರ್ಯಕ್ರಮದ ಆಯೋಜನೆಯಲ್ಲಿ ವಿಷ್ಣು, ಅಶೋಕ್ ಪೈ, ಸುಶೀಲಾ ರಾವ್ ಉಡುಪಿ, ಹರಿಕೃಷ್ಣ ರಾವ್ ಸಗ್ರಿ, ಸಹಕರಿಸಿದರು.