ಹಕ್ಕಿ ಜ್ವರ: ಮೈಸೂರು-ಕೇರಳ ಗಡಿಯಲ್ಲಿ ಕಟ್ಟೆಚ್ಚರ, ಡಿಸಿ ರೋಹಿಣಿ ಸಿಂದೂರಿ ಆದೇಶ
ಮೈಸೂರು: ಕೊರೋನಾ ಸಾಂಕ್ರಾಮಿಕ ನಡುವೆಯೇ ದೇಶದಲ್ಲಿ ವ್ಯಾಪಕ ಭೀತಿ ಹುಟ್ಟಿಸಿರುವ ಹಕ್ಕಿ ಜ್ವರ ವ್ಯಾಪಕ ಹರಡುತ್ತಿರುವ ಹಿನ್ನಲೆಯಲ್ಲಿ ಕೇರಳ-ಮೈಸೂರು ಗಡಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಆದೇಶ ನೀಡಿದ್ದಾರೆ.
ಮಹಾಮಾರಿ ಕೊರೊನಾ ನಡುವೆ ಈಗ ಹಕ್ಕಿಜ್ವರದ ಆತಂಕ ಹೆಚ್ಚಾಗಿದ್ದು, ಈಗಾಗಲೇ ಹಕ್ಕಿಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದ್ದು, ರೋಗ ಹರಡುವಿಕೆಯನ್ನು ತಡೆಗಟ್ಟಲು 12,000ಕ್ಕೂ ಹೆಚ್ಚು ಪಕ್ಷಿಗಳನ್ನು ಆ ರಾಜ್ಯದಲ್ಲಿ ನಾಶಪಡಿಸಲಾಗಿದೆ.
ಈಗಾಗಲೇ ಕೇರಳದಲ್ಲಿ ವ್ಯಾಪಕ ಭೀತಿ ಹುಟ್ಟಿಸಿರುವ ಹಕ್ಕಿ ಜ್ವರ ಇದೀಗ ರಾಜ್ಯಕ್ಕೂ ಕಾಲಿಡುವ ಭೀತಿ ಇದೆ. ಮೈಸೂರಿನಲ್ಲಿ ಹಕ್ಕಿಜ್ವರ ಭೀತಿ ಆತಂಕ ಮನೆ ಮಾಡಿದ್ದು ಮೈಸೂರು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಮೈಸೂರು-ಕೇರಳ ಗಡಿಯಲ್ಲಿ ಕೋಳಿ, ಪಕ್ಷಿಗಳ ಸಾಗಾಟವನ್ನು ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಹಾಗೂ ಎಚ್ ಡಿ.ಕೋಟೆಯ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಕೇರಳದಿಂದ ಬರುವ ಪ್ರತಿ ವಾಹನವನ್ನು ಪರಿಶೀಲನೆ ನಡೆಸಿ, ಸ್ಯಾನಿಟೈಸ್ ಮಾಡುವಂತೆ ಸೂಚಿಸಿದ್ದಾರೆ. ಮೈಸೂರಿನ ಕೋಳಿ ಫಾರಂ, ನಾಟಿಕೋಳಿ, ವಲಸೆ ಪಕ್ಷಿ ಸೇರಿ ಯಾವುದೇ ಪಕ್ಷಿಗಳ ಸಾವು ಕಂಡರೆ ಮಾಹಿತಿ ನೀಡುವಂತೆ ಡಿಸಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಇದೀಗ, ಮತ್ತೆ ಹಕ್ಕಿಜ್ವರದಿಂದ ಮೃಗಾಲಯದ ಕಡೆ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ.