ಬೆಂಗಳೂರು: ನಕಲಿ ಐಡಿ ಕಾರ್ಡ್ ಜಾಲ ಭೇದಿಸಿದ ಸಿಸಿಬಿ ಪೊಲೀಸ್ – 10 ಮಂದಿಯ ಬಂಧನ
ಬೆಂಗಳೂರು: ಸರ್ಕಾರದ ಮುದ್ರೆಯನ್ನು ಬಳಸಿಕೊಂಡು ನಕಲಿ ಐಡಿ ಕಾರ್ಡ್ ಗಳನ್ನು ಮಾಡಿ ಜನಸಾಮಾನ್ಯರಿಗೆ ವಂಚಿಸುತ್ತಿದ್ದ ತಂಡವೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕನಕಪುರ ರೋಡ್ನಲ್ಲಿರುವ ಹೆರಿಟೇಜ್ ನಲ್ಲಿ ನಕಲಿ ಐಡಿ ಜಾಲ ನಡೆಯುತ್ತಿದೆ ಎಂಬ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿ, ಖಾಸಗಿ ಕಂಪನಿಯ ಉದ್ಯೋಗಿಗಳು ಸೇರಿದಂತೆ 10 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಮಲೇಶ್, ಲೋಕೇಶ್, ಸುದರ್ಶನ್, ದರ್ಶನ್, ಶ್ರೀಧರ್, ಚಂದ್ರಪ್ಪ, ಅಭಿನಾಶ್, ತೇಜಸ್ ಹಾಗೂ ಶ್ರೀಧರ್ ದೇಶಪಾಂಡೆ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರು ದಾಳಿ ವೇಳೆ ಹೆಸರು ವಿಳಾಸವಿಲ್ಲದ 28 ಸಾವಿರ ವೋಟರ್ ಐಡಿ, 9 ಸಾವಿರ ಆಧಾರ್ ಕಾರ್ಡ್, 9 ಸಾವಿರ ಪಾನ್ ಕಾರ್ಡ್ ಗಳು 12,200 ಆರ್ ಸಿ ಕಾರ್ಡ್ ಗಳು, 6,240 ಹೆಸರು ವಿಳಾಸವಿರುವ ನಕಲಿ ಎಲೆಕ್ಷನ್ ಐಡಿಗಳು ಪತ್ತೆಯಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ರೋಸ್ ಮಾರ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿ ನಕಲಿ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆರ್ ಟಿಒ ಕಚೇರಿಯ ಕಾರ್ಡ್ ಗಳನ್ನ ಪ್ರಿಂಟಿಂಗ್ ಮಾಡಲು ರೋಸ್ ಮಾರ್ಟ್ ಕಂಪನಿ ಗುತ್ತಿಗೆ ಪಡೆದಿತ್ತು. ಇದನ್ನೇ ಲಾಭವನ್ನಾಗಿಸಿದ ಕಂಪನಿಯ ಇಬ್ಬರು ಮಾಜಿ ಮತ್ತು ಕೆಲ ಹಾಲಿ ನೌಕರರಿಂದ ಸರ್ಕಾರಕ್ಕೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.