‘ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮಾನವರತ್ನ’ ಪ್ರಶಸ್ತಿಗೆ ಜಿ.ರಾಜಶೇಖರ್ ಆಯ್ಕೆ
ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಈ ವರ್ಷದಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಮಾನವೀಯ ಮೌಲ್ಯಗಳಿಗಾಗಿ ಹೋರಾಡುವ ಉಡುಪಿ ಜಿಲ್ಲೆಯ ವ್ಯಕ್ತಿಗೆ “ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮಾನವರತ್ನ” ಪ್ರಶಸ್ತಿ ಹಾಗೂ ಸಮಾಜ ಸೇವಾರಂಗದಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ ‘ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸೇವಾ ರತ್ನ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ.
ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಒಕ್ಕೂಟದ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭವು ಜ.9 ರಂದು ಉಡುಪಿಯ ಅಂಬಾಗಿಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿರುವ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ’ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಮುಹಮ್ಮದ್ ಯಾಸೀನ್ ಮಲ್ಪೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮಾರಂಭವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಉದ್ಘಾಟಿಸಲಿದ್ದು, ವಾರ್ತಾ ಭಾರತಿ ಕನ್ನಡ ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಮ್, ಚಂದ್ರ ಪೂಜಾರಿ ಮುಖ್ಯ ಭಾಷಣ ಮಾಡಲಿದ್ದು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಪ್ರಸ್ತಾವನೆ ಹಾಗೂ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಇನ್ನು ಈ ಪ್ರಶಸ್ತಿಯು ಪ್ರಶಸ್ತಿ ಮತ್ತು 25000 ರೂಪಾಯಿಗಳ ನಗದನ್ನೊಳಗೊಂಡಿರುತ್ತದೆ. 2020-2021ರ ಸಾಲಿನ ಚೊಚ್ಚಲ ‘ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮಾನವ ರತ್ನ’ ಪ್ರಶಸ್ತಿಗೆ ಖ್ಯಾತ ಪತ್ರಕರ್ತ, ಸಾಹಿತಿ ಮತ್ತು ಮಾನವ ಹಕ್ಕು ಹೋರಾಟಗಾರ ಜಿ. ರಾಜಶೇಖರ್ ಹಾಗೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸೇವಾರತ್ನ’ ಪ್ರಶಸ್ತಿಗೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಮುಹಮ್ಮದ್ ಇಸ್ಮಾಯಿಲ್ ತೋನ್ಸೆ ಅವರು ಆಯ್ಕೆಯಾಗಿದ್ದಾರೆ.
ಈ ಸಮಾವೇಶದಲ್ಲಿ ಜಿಲ್ಲೆಯ 9 ಮಂದಿ ಹಿರಿಯ ಸಾಧಕರಾದ, ಕ್ರೈಸ್ತ ಧರ್ಮಗುರುಗಳು ಹಾಗೂ ಸಾಮಾಜಿಕ ಹೋರಾಟಗಾರ ಫಾ| ವಿಲಿಯಮ್ ಮಾರ್ಟಿಸ್, ಉಡುಪಿಯ ಪ್ರಖ್ಯಾತ ಜನಪದ ವಿದ್ವಾಂಸ ಬನ್ನಂಜೆ ಬಾಬು ಆಮೀನ್, ಮಲ್ಲೆಯ ಖ್ಯಾತ ಮತ್ಯೋದ್ಯಮಿ ಸಾಧು ಸಾಲಿಯಾನ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ್ ದಾಸ್ ಬನ್ನಂಜೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಪರ್ಕಳ, ಉಡುಪಿಯ ಖ್ಯಾತ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಉಡುಪಿ ಆಶಾನಿಲಯ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಶಶಿಕಲಾ ಬೆಂಜಮಿನ್ ಕೋಟ್ಯಾನ್, ಕಾರ್ಕಳದ ಸಮಾಜ ಸೇವಕಿ ಆಯಿಶಾ ಕಾರ್ಕಳ ಹಾಗೂ ಕೋಡಿ-ಕುಂದಾಪುರದ ಸಮಾಜ ಸೇವಕಿ ಲಕ್ಷ್ಮೀಬಾಯಿ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು.
ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜು ಪೂಜಾರಿ ಬೈಂದೂರು ಹಾಗೂ ಸಹಬಾಳ್ವೆ ಉಡುಪಿಯ ಅಧ್ಯಕ್ಷ ಅಮೃತ ಶೆಣೈ ಉಡುಪಿ, ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಬ್ದುಲ್ಲಾ ನಾವುಂದ, ಕಾಸಿಮ್ ಬಾರ್ಕೂರು, ಎಂ.ಪಿ. ಮೊಯಿದಿನಬ್ಬ ಹಾಗೂ ಅಶ್ಫಾಕ್ ಅಹ್ಮದ್ ಕಾರ್ಕಳ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಇಕ್ಬಾಲ್ ಎಸ್ ಕಟಪಾಡಿ, ಕಾರ್ಯಕ್ರಮದ ಸಂಚಾಲಕ ವಿ.ಎಸ್. ಉಮರ್, ಪತ್ರಿಕಾ ಕಾರ್ಯದರ್ಶಿ ಸಲಾಹುದ್ದೀನ್ ಅಬ್ದುಲ್ಲಾ ಉಪಸ್ಥಿತರಿದ್ದರು.