ಕಸ್ತೂರಿರಂಗನ್ ವರದಿ: ಸರ್ಕಾರ ಅಹವಾಲು ಸಲ್ಲಿಸಲಿ
ಕುಂದಾಪುರ: ‘ಕಸ್ತೂರಿ ರಂಗನ್ ವರದಿಯಲ್ಲಿ ಜನಜೀವನಕ್ಕೆ ಮಾರಕವಾಗಿರುವ ಅಂಶಗಳ ಬಗ್ಗೆ ಅಗತ್ಯ ಕಾನೂನು ತಿದ್ದುಪಡಿ ತಂದು, ಹಸಿರು ಪೀಠದ ಮುಂದೆ ರಾಜ್ಯ ಸರ್ಕಾರ ತನ್ನ ಅಹವಾಲನ್ನು ಮಂಡಿಸಬೇಕು’ ಎಂದು ಶನಿವಾರ ಇಲ್ಲಿ ನಡೆದ ಮಾಸಿಕ ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಸಮಿತಿ ಆಗ್ರಹಿಸಿದೆ. ಘಟಕದ ಅಧ್ಯಕ್ಷ ಸೀತಾರಾಮ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ‘ಕೇರಳದಂತೆ ಪ್ರತಿ ಗ್ರಾಮದಲ್ಲಿ ನಕ್ಷೆ ಆಧಾರಿತ ಸಮೀಕ್ಷೆ ನಡೆಸಿ, ಕೈಬಿಡಬೇಕಾದ ರೈತರ ಮನೆ, ಕೃಷಿಭೂಮಿಗಳನ್ನು ಗುರುತಿಸಿ, ಕೇಂದ್ರಕ್ಕೆ ವರದಿ ನೀಡಬೇಕು.ಅಭಯಾರಣ್ಯಗಳಿಗೆ ಹೊಂದಿಕೊಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳ ಬಗ್ಗೆ ಜನರಿಗೆ ವಾಸ್ತವ ಮಾಹಿತಿ ನೀಡಬೇಕು’ ಎಂದು ಸಭಿಕರು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಮಾತನಾಡಿ, ‘ವರದಿ ಜಾರಿಯ ಕುರಿತು ಕೇಂದ್ರ ಸರ್ಕಾರದ ಮೇಲೆ ಹಸಿರು ಪೀಠ ಒತ್ತಡ ಹೇರುತ್ತಲೇ ಇದೆ. ಇನ್ನೊಂದು ಕಡೆ ಅಭಯಾರಣ್ಯ ಹಾಗೂ ಸಂರಕ್ಷಿತ ಅರಣ್ಯಗಳ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯದ ಹೆಸರಿನಲ್ಲಿ ಪ್ರೊ. ಮಾಧವ ಗಾಡ್ಗೀಲ್ ವರದಿ ಅನುಷ್ಠಾನಕ್ಕೆ ಸಿದ್ಧತೆ ಮಾಡಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 2017 ರಲ್ಲಿ ಮುಕಾಂಬಿಕಾ ಅಭಯಾರಣ್ಯವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದು, ಅದಕ್ಕೆ ಹೊಂದಿಕೊಂಡ ಕುಂದಾಪುರ ತಾಲ್ಲೂಕಿನ 25 ಗ್ರಾಮಗಳಲ್ಲಿ 12,508 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಇತ್ತೀಚಿಗೆ ಪ್ರಕಟಗೊಂಡ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ 12 ಗ್ರಾಮಗಳ 5,545.7 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಈ ಗ್ರಾಮಗಳ ಯಾವ ಸರ್ವೆ ನಂಬರ್ಗಳು ಒಳಗೊಂಡಿವೆ? ರೈತರ ಮನೆ, ಕೃಷಿಭೂಮಿ ಎಷ್ಟು ಕೈ ಬಿಡಲಾಗುತ್ತಿದೆ ಎನ್ನುವ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಮಾಹಿತಿ ಇಲ್ಲ. ಡೀಮ್ಡ್ ಫಾರೆಸ್ಟ್ ಸಮಸ್ಯೆಯ ಜೊತೆಗೆ ಇನ್ನೊಂದು ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಸರ್ಕಾರದ ಯೋಜನೆ ಗಳ ಪ್ರಯೋಜನ ಜನರಿಗೆ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಘಟಕದ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ಯಡಿಯಾಳ, ಸುಬ್ರಹ್ಮಣ್ಯ ಐತಾಳ್, ನಾಗಪ್ಪ ಶೆಟ್ಟಿ, ಅನಂತಪದ್ಮನಾಭ ಉಡುಪ, ವೆಂಕಟೇಶ್ ರಾವ್, ಚೆನ್ನಕೇಶವ ಕಾರಂತ, ನಾಗಯ್ಯ ಶೆಟ್ಟಿ, ಮಂಜುನಾಥ ಹೆಬ್ಬಾರ್, ಸುಧಾಕರ ನಾಯಕ್, ನಾರಾಯಣ ಶೆಟ್ಟಿ, ಸತ್ಯನಾರಾಯಣ ಅಡಿಗ, ನಾಗರಾಜ ಉಡುಪ, ಜಗದೀಶ ರಾವ್, ತೇಜಪ್ಪ ಶೆಟ್ಟಿ, ಕುಶಲ ಶೆಟ್ಟಿ, ಭೋಜರಾಜ ಶೆಟ್ಟಿ, ಸುಬ್ರಹ್ಮಣ್ಯ ಉಡುಪ, ಗಣೇಶ, ಚಂದ್ರಶೇಖರ ಭಟ್, ನಾರಾಯಣ ಖಾರ್ವಿ ಹಾಗೂ ಚಂದ್ರಶೇಖರ ಉಡುಪ ಇದ್ದರು. ವಿದ್ಯುತ್ ದರ ಏರಿಕೆಗೆ ಆಕ್ಷೇಪ ಪ್ರತಿ ಯುನಿಟ್ಗೆ ₹1 ದರ ಏರಿಕೆ ಮಾಡಲು ಮೆಸ್ಕಾಂ ಸಲ್ಲಿಸಿರುವ ಪ್ರಸ್ತಾವಕ್ಕೆ ಭಾರತೀಯ ಕಿಸಾನ್ ಸಂಘ ಆಕ್ಷೇಪ ಸಲ್ಲಿಸಲು ತೀರ್ಮಾನಿಸಲಾಯಿತು. |