ಅಂಬಲಪಾಡಿ ದೇವಸ್ಥಾನ ವಿವಾದ, ಸ್ವಾಮೀಜಿ ಹಸ್ತಕ್ಷೇಪ – ಫೋನ್ ಕರೆ: ನ್ಯಾಯಾಧೀಶರ ಎಚ್ಚರಿಕೆ!
ಉಡುಪಿ: ಅಂಬಲಪಾಡಿ ಮಹಾಕಾಳಿ ಹಾಗೂ ಜನಾರ್ದನ ದೇವಸ್ಥಾನ ವಿವಾದ ಸಂಬಂಧ ಸ್ವಾಮೀಜಿಯೊಬ್ಬರು ಕರೆಮಾಡಿ ಪ್ರಕರಣದ ಕುರಿತು ಮಾತನಾಡಲು ಯತ್ನಿಸಿದ್ದರು. ಇಂತಹ ನಡವಳಿಕೆ ಸರಿಯಲ್ಲ ಎಂದು ಜಿಲ್ಲಾ ನ್ಯಾಯಾಧೀಶರಾದ ಜೆ.ಎನ್.ಸುಬ್ರಹ್ಮಣ್ಯ ಅವರು ಆದೇಶದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಧೀಶರು ಡಿ. 23ರಂದು ನೀಡಿರುವ ಆದೇಶ ಪ್ರತಿಯಲ್ಲಿ ಪ್ರಕರಣವೊಂದು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗ ಪತ್ರ ಬರೆಯುವುದಾಗಲಿ, ಕರೆ ಮಾಡುವುದಾಗಲಿ ಸರಿಯಲ್ಲ. ಅಂಬಲಪಾಡಿ ದೇವಸ್ಥಾನ ವಿವಾದ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಐದು ಅನಾಮಧೇಯ ಪತ್ರಗಳು ಬಂದಿವೆ.
ಮೇಲ್ಮನವಿದಾರರ ಪರ ಆದೇಶ ನೀಡುವಂತೆಯೂ ಪತ್ರದಲ್ಲಿ ತಿಳಿಸಲಾಗಿದೆ. ಇಂತಹ ಕೆಲಸ ಮುಂದೆ ಯಾರಿಂದಲೂ ನಡೆಯಬಾರದು ಎಂದು ನ್ಯಾಯಾಧೀಶರು ಕಟುವಾದ ಶಬ್ದಗಳಲ್ಲಿ ಹೇಳಿದ್ದಾರೆ. ಕರೆ ಮಾಡಿದ ಸ್ವಾಮೀಜಿಯ ಹೆಸರನ್ನು ಆದೇಶದಲ್ಲಿ ಬಹಿರಂಗಗೊಳಿಸಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡುವವರಿಗೆ ಪ್ರಕರಣ ಸಂಬಂಧವಾಗಿ ನ್ಯಾಯಾಲಯಕ್ಕೆ ಪತ್ರ ಬರೆಯಬಾರದು, ಅನ್ಯ ಮಾರ್ಗ ಬಳಸಿ ಒತ್ತಡ ಹೇರಬಾರದು ಎಂಬ ಸೂಚನೆಗಳನ್ನು ಬಾರ್ ಅಸೋಸಿಯೇಷನ್ ಸದಸ್ಯರು ಸ್ಪಷ್ಟವಾಗಿ ನೀಡಬೇಕು ಎಂದೂ ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಅಂಬಲಪಾಡಿ ಮಹಾಕಾಳಿ ಹಾಗೂ ಜನಾರ್ದನ ದೇವಸ್ಥಾನವನ್ನು ಮುಜರಾಯಿ ಇಲಾಖೆಯಿಂದ ಕುಟುಂಬದ ಸುಪರ್ದಿಗೆ ಒಪ್ಪಿಸಬೇಕು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ವಿಜಯ್ ಬಲ್ಲಾಳ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ.