ಅಗ್ಗದ ದರದಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಮನೆ ನಿರ್ಮಿಸಿಕೊಡುವುದು ಸರ್ಕಾರದ ಆದ್ಯತೆ: ಪ್ರಧಾನಿ ಮೋದಿ
ನವದೆಹಲಿ: ಇಂದು ದೇಶದ ನಾಗರಿಕರಿಗೆ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಗೃಹ ನಿರ್ಮಿಸಿಕೊಡುವುದು ಸರ್ಕಾರದ ಆದ್ಯತೆಯಾಗಿದೆ. ಹಿಂದೆ ಸರ್ಕಾರ ಗೃಹ ನಿರ್ಮಾಣದ ಗುಣಮಟ್ಟ, ತಂತ್ರಜ್ಞಾನ, ವೆಚ್ಚಗಳ ಬಗ್ಗೆ ಆದ್ಯತೆ ನೀಡುತ್ತಿರಲಿಲ್ಲ. ಆದರೆ ಇಂದು ಸರ್ಕಾರದ ಆದ್ಯತೆ, ಗೃಹ ನಿರ್ಮಾಣವನ್ನು ನೋಡುತ್ತಿರುವ ರೀತಿ ಬೇರೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
2022ರ ಹೊತ್ತಿಗೆ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸೂರು ಒದಗಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ದಿನ ಪುನರುಚ್ಚರಿಸಿದ್ದಾರೆ.
ಮುಂದಿನ ವರ್ಷ ದೇಶ 75ನೇ ವರ್ಷದ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬರೂ ಮನೆ ಹೊಂದುವ ಮೂಲಕ ಜೀವನದಲ್ಲಿ ಸ್ವತಂತ್ರರಾಗಬೇಕೆಂದು ನಮ್ಮ ಸರ್ಕಾರದ ಗುರಿಯಾಗಿದೆ. ಆಂಧ್ರ ಪ್ರದೇಶದಂತಹ ರಾಜ್ಯಗಳು ನೈಸರ್ಗಿಕ ವಿಪತ್ತುಗಳಿಗೆ ಹೆಚ್ಚು ತುತ್ತಾಗಿವೆ. ಇಂತಹ ರಾಜ್ಯಗಳಿಗೆ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ಹಗುರ ಮನೆ ಯೋಜನೆಗಳು (ಎಲ್ ಹೆಚ್ ಪಿ)ಗಳು ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಅವರು ಇಂದು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ಹಗುರ ಮನೆ ಯೋಜನೆಗಳು(ಎಲ್ ಹೆಚ್ ಪಿ)ಗಳಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೈಗೆಟಕುವ ದರದಲ್ಲಿ ಸ್ಥಿರವಾದ ಮನೆಗಳನ್ನು ನಿರ್ಮಿಸಿಕೊಡುವ ಆಶಾ-ಭಾರತ ಯೋಜನೆ ದೇಶದಲ್ಲಿ ಮುಂದುವರಿದಿದ್ದು, ಆಧುನಿಕ ತಂತ್ರಜ್ಞಾನಗಳ ಮೂಲಕ ಮನೆಗಳನ್ನು ನಿರ್ಮಿಸಿಕೊಡುವ ಕೆಲಸಕ್ಕೆ ಸಂಶೋಧನೆ ಮತ್ತು ಸ್ಟಾರ್ಟ್ ಅಪ್ ಉದ್ಯಮಗಳ ಪ್ರಚಾರ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ಯೋಜನೆಯಡಿ ಮನೆಗಳನ್ನು ಆರಂಭದ ಹಂತಗಳಲ್ಲಿ ಇಂದೋರ್, ರಾಜ್ ಕೋಟ್, ಚೆನ್ನೈ, ರಾಂಚಿ, ಅಗರ್ತಲಾ ಮತ್ತು ಲಕ್ನೊಗಳಲ್ಲಿ ನಿರ್ಮಿಸಲಾಗುತ್ತದೆ. ಪ್ರತಿ ಕಡೆಗಳಲ್ಲಿ ಸುಮಾರು ಸಾವಿರ ಮನೆಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಿಸಲಾಗುತ್ತದೆ.
ಆರು ದೇಶಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ನಿರ್ಮಿಸಿಕೊಡಲಾಗುತ್ತಿರುವ ಮನೆಗಳು ದೇಶದಲ್ಲಿ ಗೃಹ ನಿರ್ಮಾಣ ಯೋಜನೆಗಳಿಗೆ ಹೊಸ ದಿಕ್ಕು ಕಲ್ಪಿಸಲಿದೆ. ಇದು ಸಹಕಾರ ಸಂಯುಕ್ತ ವ್ಯವಸ್ಥೆಯನ್ನು ಬಲವರ್ಧಿಸಲಿದೆ ಎಂದರು. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ತ್ರಿಪುರಾ, ಆಂಧ್ರ ಪ್ರದೇಶಗಳ ಮುಖ್ಯಮಂತ್ರಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.