ಕಡೆಕಾರ್: ಬಿಜೆಪಿಯ ಘಟಾನುಘಟಿಗಳಿಗೆ ಸೋಲುಣಿಸಿದ ಮತದಾರ, ಕಾಂಗ್ರೆಸ್ ತೆಕ್ಕೆಗೆ ಗ್ರಾ.ಪಂ!
ಉಡುಪಿ: (ಉಡುಪಿ ಟೈಮ್ಸ್ ವರದಿ)ಈ ಭಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಎಲ್ಲೆಡೆ ಭರ್ಜರಿ ಜಯ ಗಳಿಸಿದೆ. ಕಾಂಗ್ರೆಸ್ ಭದ್ರ ಕೋಟೆಗಳಲ್ಲಿ ಮುನ್ನುಗ್ಗಿದ ಬಿಜೆಪಿಗೆ ತಮ್ಮ ಭದ್ರ ಕೋಟೆಯಲ್ಲೆ ಹೀನಾಯ ಸೋಲಾಗಿದೆ.
ಉಡುಪಿ ತಾಲೂಕಿನ ಕಡೆಕಾರ್ ಗ್ರಾಮ ಪಂಚಾಯತ್ ನ 21 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಕಾಂಗ್ರೆಸ್ ಬಾಚಿಕೊಂಡಿದ್ದು, ಬಿಜೆಪಿ 8 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.
ಕಡೆಕಾರ್ ಗ್ರಾಮ ಪಂಚಾಯತ್ ನ ಕುತ್ಪಾಡಿ 1ನೇ ವಾರ್ಡ್ ನಲ್ಲಿ ಸತತ ನಾಲ್ಕು ಬಾರಿ ಗೆದ್ದು ಬೀಗಿದ್ದ ಬಿಜೆಪಿಯ ಹಿರಿಯ ಸದಸ್ಯ ಪ್ರದೀಪ್ ಚಂದ್ರ ಕುತ್ಪಾಡಿ ಅವರು ಈ ಭಾರಿ ಹೀನಾಯ ಸೋಲು ಅನುಭವಿಸಿದ್ದಾರೆ. ಇವರು ನಾಲ್ಕು ಬಾರಿ ಗೆದ್ದಿದ್ದು, ಒಂದು ಬಾರಿ ಪಂಚಾಯತ್ ನ ಅಧ್ಯಕ್ಷರಾಗಿ, ಪಕ್ಷದ ಹೆಮ್ಮರ ಎಂದೇ ಗುರುತಿಸಿಕೊಂಡಿದ್ದರು. ಅಲ್ಲದೆ ಇವರು ಪಕ್ಷದಲ್ಲಿ ತಮ್ಮ ಜೊತೆಗೆ ಸ್ಪರ್ಧಿಸುತ್ತಿದ್ದ ಇತರ ಅಭ್ಯರ್ಥಿಗಳ ಗೆಲುವಿನ ರೂವಾರಿಯಾಗಿದ್ದರು.
ಇದೀಗ ಇವರ ಸೋಲು ಕಮಲ ಪಾಳಯವನ್ನು ತಲ್ಲಣಗೊಳಿಸಿದೆ. ಇದರೊಂದಿಗೆ ಪಂಚಾಯತ್ ನ ಹಾಲಿ ಅಧ್ಯಕ್ಷರಾಗಿದ್ದ ರಘುನಾಥ್ ಕೋಟ್ಯಾನ್ ಅವರೂ ಕೂಡಾ ಈ ಬಾರಿ ಸೋಲನ್ನುಭವಿಸಿದ್ದಾರೆ. ಇದೀಗ ಇವರ ಸೋಲಿನ ಕುರಿತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ಜೊತೆಗಿದ್ದವರಿಂದಲೇ ಇವರು ಸೋಲನ್ನು ಅನುಭವಿಸುವಂತಾಯಿತು. ಜೊತೆಗೆ ಇದ್ದವರಿಗಾಗಿ ಮತ ಕೇಳಿ ಇವರು ಸೋತರು, ಇವರ ಹೆಸರು ಹೇಳಿಕೊಂಡು ಇತರರು ಗೆದ್ದಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದ್ದು ಇವರ ಸೋಲನ್ನು ಈಗ ಪಕ್ಷದ ಸೋಲು ಎಂದೇ ಬಣ್ಣಿಸಲಾಗುತ್ತಿದೆ.