ಮಂಗಳೂರು: ಸಾರ್ವಜನಿಕರಿಗೆ ಬೀಚ್ ಪ್ರವೇಶ ನಿಷೇಧ – ಜಿಲ್ಲಾಧಿಕಾರಿ ಆದೇಶ
ಮಂಗಳೂರು ಡಿ.29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ನಿರ್ದೇಶನದಂತೆ, ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಯುನೈಟೆಡ್ ಕಿಂಗ್ಡಮ್ನಲ್ಲಿ ಹೊಸದಾಗಿ ರೂಪಾಂತರಗೊಂಡಿರುವ SARS-CoV-2 ವೈರಾಣು ಪತ್ತೆಯಾಗಿದ್ದು, ತೀವ್ರ ಗತಿಯಲ್ಲಿ ಹರಡಿ ಬೆಳವಣಿಗೆ ಹೊಂದುತ್ತಿದೆ. ಅಲ್ಲದೇ ಯುನೈಟೆಡ್ ಕಿಂಗ್ಡಮ್ನಿಂದ ರಾಜ್ಯಕ್ಕೆ ಇತ್ತೀಚೆಗೆ ಆಗಮಿಸಿರುವ ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ SARS-CoV-2 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಹೊಸವರ್ಷ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕಡಲ ತೀರ ಪ್ರದೇಶಗಳಲ್ಲಿ ಅತೀ ಹೆಚ್ಚು ಜನಸಂದಣಿ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್ಗಳಿಗೆ/ ಎಲ್ಲಾ ಕಡಲ ಕಿನಾರೆಗಳಿಗೆ ಡಿಸೆಂಬರ್ 31 ರಂದು ಮಧ್ಯಾಹ್ನ 12 ಗಂಟೆಯಿಂದ ಜನವರಿ 2 ರಂದು ಮಧ್ಯಾಹ್ನ 12 ಗಂಟೆಯವರೆಗೆ ಸ್ಥಳೀಯ ಹಾಗೂ ಸಾಂಪ್ರದಾಯಿಕ ಮೀನುಗಾರರನ್ನು ಹೊರತು ಪಡಿಸಿ ಇತರೇ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಪ್ರವೇಶಿಸುವುದನ್ನು ವಿಪತ್ತು ನಿರ್ವಹಣಾ ಕಾಯ್ದೆ-2005 ರ ಕಲಂ (34) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.