ಉಡುಪಿ: ನಗರ ಸಭೆಯಲ್ಲಿ ರಾತ್ರಿಯಾದರೆ ದಲ್ಲಾಳಿಗಳ ಕಾಟ!

ಉಡುಪಿ: ನಗರ ಸಭೆಯ ಸಾಮಾನ್ಯ ಸಭೆಯು ಇಂದು ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.

ಇಂದು ನಡೆದ ಸಭೆಯಲ್ಲಿ ನಗರಸಭಾ ವಿಪಕ್ಷ ಸದಸ್ಯೆ ಅಮೃತಾ ಕೃಷ್ಣ ಮೂರ್ತಿ ನಗರ ಸಭೆಯಲ್ಲಿ ಸಾರ್ವಜನಿಕರ ಸೇವೆಗಳ ಅವ್ಯವಸ್ಥೆ ಕುರಿತು ಧ್ವನಿ ಎತ್ತಿದರು. 
ಈ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ನಗರ ಸಭೆ ಕಚೇರಿಯಲ್ಲಿ ಖಾತಾ ಬದಲಾವಣೆ , ಜನನ ಮರಣ ಪತ್ರಗಳಿಗೆ ಸಾರ್ವಜನಿಕರಿಗೆ ದಿನಕ್ಕೊಂದು ದಾಖಲೆಗಳನ್ನು ನೀಡುವಂತೆ ಕಚೇರಿಯ ಅಧಿಕಾರಿಗಳು ಕೇಳುತ್ತಾರೆ. ಇದರಿಂದ  ಸಾರ್ವಜನಿಕರು ಒಂದು ಕೆಲಸಕ್ಕಾಗಿ ತಿಂಗಳು ಗಟ್ಟಲೆ ಅಲೆದಾಡಬೇಕಾಗುತ್ತಿದೆ.

ಉಡುಪಿಯ ಜನತೆ ಬುದ್ದಿವಂತರು,  ಅಧಿಕಾರಿಗಳು ಆಯಾ ಕೆಲಸಕ್ಕೆ ಯಾವೆಲ್ಲಾ ದಾಖಲೆಗಳು ಬೇಕು ಎಂದು ಮೊದಲೇ ತಿಳಿಸಿದರೆ ಅವರು ಬರುವಾಗಲೇ ಎಲ್ಲಾ ದಾಖಲೆಗಳನ್ನು ತರುತ್ತಾರೆ ಎಂದು ತಿಳಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯ ಕೊಡಂಚ ಅವರು ಧ್ವನಿ ಗೂಡಿಸಿ, ಸರಕಾರಿ ಕೆಲಸಕ್ಕೆ ಬೇಕಾಗಿರುವ ದಾಖಲೆಗಳನ್ನು ಪಟ್ಟಿ ಮಾಡಿ ಅವುಗಳ ಪ್ರತಿಯನ್ನು ಸಾರ್ವಜನಿಕರಿಗೆ ನೀಡಬೇಕು ಇದರಿಂದ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಅಲೆದಾಡುವ ಸಮಸ್ಯೆ ಕಡಿಮೆಯಾಗುತ್ತದೆ ಎಂದರು.  

ಇನ್ನು ನಗರ ಸಭೆ ಕಚೇರಿ ಅವಧಿ ಬಳಿಕ ದಳ್ಳಾಳಿ ಗಳು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದು, ನಗರ ಸಭೆ ಆರ್ ಟಿ ಒ ಕಚೇರಿಯಂತಾಗಿದೆ. ಆದ್ದರಿಂದ ನಗರ ಸಭೆಯಲ್ಲಿ ಕಚೇರಿ ಅವಧಿ ಮುಗಿದ ಬಳಿಕ ಕಚೇರಿಯನ್ನು ಬಂದ್ ಮಾಡಬೇಕು, ಇದಕ್ಕಾಗಿ ಲಾಕ್ ಸಿಸ್ಟಮ್‌ ಅನ್ನು ಅಳವಡಿಸಬೇಕು ಎಂದು ಪ್ರಭಾಕರ ಪೂಜಾರಿ ಆಗ್ರಹಿಸಿದರು.

ನಗರ ಸಭಾ ವ್ಯಾಪ್ತಿಯ ಗೋಮಾಳಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ, ಅದು ಗೋವುಗಳ ರಕ್ಷಣೆಗಾಗಿ ಇದೆಯೋ ಅಥವಾ ಅಲ್ಲಿ ಇನ್ಯಾವುದೇ ಚಟುವಟಿಕೆಗಳು ನಡೆಯುತ್ತಿದೆಯೋ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು ಹಾಗೂ ಎಲ್ಲಾ ಗೋ ಮಾಳಗಳು ಗೋವುಗಳಿಗಾಗಿಯೇ ಸೀಮಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಸದಸ್ಯ ವಿಜಯ್ ಕೊಡವೂರು ಮನವಿ ಮಾಡಿಕೊಂಡರು. 

ಇನ್ನು ಬಜೆ ಡ್ಯಾಮ್ ನಲ್ಲಿ ನೀರು ಸೋರಿಕೆಯಾಗುವುತ್ತಿರುವ ಕುರಿತು ಸಭೆಯಲ್ಲಿ ಗಮನ ಸೆಳೆದಿದ್ದು, ಉಡುಪಿಯ ನಗರ ಸಭೆ ಮತ್ತು ಪಂಚಾಯತ್ ವ್ಯಾಪ್ತಿಗೆ ಮುಂದಿನ 6 ತಿಂಗಳು ನೀರು ಪೂರೈಕೆ ಮಾಡಬೇಕಾಗಿದೆ. ಈಗಲೇ ಈ ರೀತಿ ನೀರು ಪೋಲಾದರೆ ಮುಂದಿನ‌ ದಿನಗಳಲ್ಲಿ ನೀರು ಪೂರೈಕೆಗೆ ಸಮಸ್ಯೆ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ನಗರ ಸಭಾ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!