ಡಿ.31ರಂದು ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿ
ಬೆಂಗಳೂರು: ಹೊಸ ರೂಪಾಂತರದ ಕೊರೋನಾ ವೈರಸ್ ಹರಡುವಿಕೆ ತಡೆಯುವ ಉದ್ದೇಶದಿಂದ ಈ ಹೊಸ ವರ್ಷಾಚರಣೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಡಿಸೆಂಬರ್ 31ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಪಂತ್, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ. ರಾಜಧಾನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ ಎಂದರು.
ಇಡೀ ಬೆಂಗಳೂರಿನಲ್ಲಿ ನಾಕಾಬಂದಿ ಇರಲಿದ್ದು, ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಕಮಲ್ಪಂತ್ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಇರಲಿದ್ದು, ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆದರೆ, ಖಾಸಗಿ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ನೀಡಲಾಗಿದೆ. ಪಬ್ಗಳಲ್ಲಿ ಈವೆಂಟ್, ಶೋ ನಡೆಸುವಂತಿಲ್ಲ ಹಾಗೂ ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ. ಹೊಟೇಲ್ಗಳಲ್ಲಿ ಮಾರ್ಗಸೂಚಿ ಪಾಲಿಸಬೇಕು ಎಂದರು.
ನಗರದ ಕೆಲವೆಡೆ ವಿಶೇಷ ನಿಗಾ ಇಡಲಾಗಿದ್ದು, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ಸ್ಟ್ರೀಟ್, ಕೋರಮಂಗಲ, ಇಂದಿರಾನಗರಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗುವುದು. ಈ ಏರಿಯಾಗಳಲ್ಲಿ ಕೂಪನ್ ಬುಕ್ಕಿಂಗ್ ಕಡ್ಡಾಯವಾಗಿದೆ. ಸಂಭ್ರಮಾಚರಣೆ ವೇಳೆ ವಿಶೇಷ ಡಿಜೆಗೆ ನಿರ್ಬಂಧ ಹಾಕಲಾಗಿದ್ದು, ನಿಯಮ ಮೀರಿದರೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿಸೆಂಬರ್ 31ರ ರಾತ್ರಿ ವೀಲಿಂಗ್, ಡ್ರ್ಯಾಗ್ ರೇಸ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರಿ ಸಂಚಾರ ಮಾಡಿದರೆ, ವಾಹನ ಜಪ್ತಿ ಮಾಡಲಾಗುವುದು. ಯಾವುದೇ ಸಾರ್ವಜನಿಕ ಸ್ಥಳ ರಸ್ತೆ, ಪಾರ್ಕ್ ಬಳಿ ಯಾವುದೇ ಸಂಭ್ರಮಾಚರಣೆ ನಡೆಸಲು ಅವಕಾಶ ಇಲ್ಲ. ಡಿಜೆ ಹಾಗೂ ಯಾವುದೇ ಸಂಗೀತ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಆದರೆ, ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್, ಖಾಸಗಿ ಕ್ಲಬ್ ಗಳಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.