ರೂಪಾಂತರ ಕೊರೋನಾ ವೈರಸ್ ಭೀತಿ: ನಾಳೆ ಹೊಸ ಮಾರ್ಗಸೂಚಿ ಬಿಡುಗಡೆ- ಬೊಮ್ಮಾಯಿ

ಬೆಂಗಳೂರು: ಕೋವಿಡ್ ರೋಗಾಣು ರೂಪಾಂತರ ಗೊಂಡಿರುವುದರಿಂದ ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು. ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನಡೆಯುವ ಪಾರ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಅವರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ.  ಹೀಗಾಗಿ ಈ ವಿಷಯವನ್ನು ಕೇಂದ್ರಿಕರಿಸಿಕೊಂಡು ಹೊಸ ವರ್ಷಕ್ಕೆ ಅವಕಾಶವಿಲ್ಲ ಎಂದರು. 

ನೂತನ ವರ್ಷಾಚರಣೆಗೆ ನಿರ್ಬಂಧ ಹೇರುವ ಸಂಬಂಧ ನಾಳೆ(ಡಿ.28) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ನೂತನ ವರ್ಷದ ಸಂಭ್ರಮದ ನೆಪದಲ್ಲಿ ದೊಡ್ಡಸಂಖ್ಯೆಯಲ್ಲಿ ಜನರು ಸೇರಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಅವಕಾಶ ಮಾಡಬಾರದು ಎಂದು ಸಲಹೆ ನೀಡಿದರು. ಹೊಸ  ವರ್ಷಾಚರಣೆಯ ವೇಳೆ ನಡೆಯುವ ಪಾರ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅವರನ್ನು ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಆ ಹಿನ್ನೆಲೆಯಲ್ಲಿ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನೂತನ ವರ್ಷಾಚರಣೆಗೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ ಎಂದರು.

ನೂತನ ವರ್ಷದ ಹಿನ್ನೆಲೆಯಲ್ಲಿ ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ಇಲ್ಲ. ಈಗಾಗಲೇ ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಯುಕೆಯಿಂದ ಬಂದವರ ವಿಳಾಸ ಪತ್ತೆ ಹಚ್ಚುವ ಮೂಲಕ ಎಲ್ಲರನ್ನೂ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆ ಮಾಡಿಸಿಕೊಳ್ಳದವರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಿಸುವಂತೆ  ನಿರ್ದೇಶನ ನೀಡಲಾಗಿದೆ ಎಂದರು. ಮೊದಲನೆ ಹಂತದಲ್ಲಿ ಬಂದವರಿಗೆ ಕೋವಿಡ್ ರೂಪಾಂತರಿ ವೈರಸ್ ಕುರಿತು ಗೊತ್ತಿರಲಿಲ್ಲ. ಹೀಗಾಗಿ ಯಾವುದೇ ನಿರ್ಬಂಧವಿಲ್ಲದೆ ಸಂಚರಿಸಿದ್ದಾರೆ. ಅವರಿಗೂ ಫೋನ್ ಮೂಲಕ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದೇವೆ ಎಂದ ಅವರು, ರೂಪಾಂತರ ಸೋಂಕು ನಿಯಂತ್ರಣಕ್ಕೆ  ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.

ಸಿಸಿಟಿವಿ ಟೆಂಡರ್ ಪ್ರಕರಣ ಸಂಬಂಧ ಈಗಾಗಲೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ರನ್ನು ಕರೆದು ಮಾತನಾಡಿದ್ದೇನೆ. ಐಪಿಎಸ್ ಅಧಿಕಾರಿಗಳ ನಡುವಿನ ಬಹಿರಂಗ ತಿಕ್ಕಾಟ ಸಂಬಂಧ ಆದೇಶ, ಉಪದೇಶ ಕೊಡುವ ಎರಡೂ ಕೆಲಸವನ್ನು ಸಿಎಸ್ ಮತ್ತು ಡಿಜಿಪಿ  ಮಾಡಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!