ಬ್ಲೂ ಫ್ಲಾಗ್ ಬೀಚ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಡೆಗಣನೆ, ಸ್ಥಳೀಯ ಮುಖಂಡರ ಆಕ್ರೋಶ
ಉಡುಪಿ:(ಉಡುಪಿ ಟೈಮ್ಸ್ ವರದಿ) ಜಿಲ್ಲೆಯ ಬಹು ನಿರೀಕ್ಷಿತ ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ಲೂ ಫ್ಲಾಗ್ ಬೀಚ್ ನ ನಿರ್ಮಾಣಕ್ಕೆ ಆರಂಭದಿಂದಲೂ ಶ್ರಮಿಸಿದ ಸ್ಥಳೀಯರನ್ನು ಕಡೆಗಣಿಸಲಾಗಿದೆ ಎಂದು ಸ್ಥಳೀಯರು ಅಸಮಾಧಾನಗೊಂಡ ಘಟನೆ ನಡೆಯಿತು.
ಬ್ಲೂ ಫ್ಲಾಗ್ ಬೀಚ್ ನ ಯೋಜನೆಯನ್ನು ಆರಂಭದಿಂದಲೂ ಪ್ರೋತ್ಸಾಹಿಸುತ್ತಾ ಅದಕ್ಕಾಗಿ ಸಹಕಾರ ನೀಡುತ್ತಾ ಬಂದಿರುವ ಸ್ಥಳೀಯರ ಪಾತ್ರವನ್ನು ಕಾರ್ಯಕ್ರಮದಲ್ಲಿ ಕಡೆಗಣಿಸಲಾಗಿದೆ ಎಂದು ಸಭಾ ಕಾರ್ಯಕ್ರಮ ಮುಗಿದು ಅತಿಥಿಗಳು ವೇದಿಕೆ ಇಳಿಯುತ್ತಿದ್ದಂತೆ ಸ್ಥಳೀಯರು ಅಸಮಧಾನ ಹೊರಹಾಕಿದರು.
ಈ ವೇಳೆ ಬೇಸರ ವ್ಯಕ್ತಪಡಿಸಿದ ಸ್ಥಳೀಯ ಮೊಗವೀರ ಮುಖಂಡ ಅಶೋಕ ಸಾಲಿಯಾನ್ ಅವರು ಮಾತನಾಡಿ, ಈ ಪರಿಸರದಲ್ಲಿ ಬ್ಲೂ ಫ್ಲಾಗ್ ಬೀಚ್ ನಿರ್ಮಾಣ ಆರಂಭದಿಂದಲೂ ನಾವು ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ. ಎರಡೂ ಗ್ರಾಮಗಳು ಒಟ್ಟಾಗಿ ಸೇರಿ ಅನೇಕ ಸಭೆಗಳನ್ನು ನಡೆಸಿ ಇದಕ್ಕಾಗಿ ಸ್ಥಳೀಯರ ಮನವೊಲಿಸಿ ಬ್ಲೂ ಫ್ಲಾಗ್ ಬೀಚ್ ನಿರ್ಮಾಣಕ್ಕೆ ಸಹಕಾರ ನೀಡಿದ್ದೇವೆ. ಬೀಚ್ ಅಭಿವೃದ್ದಿಯಲ್ಲಿ ಸ್ಥಳೀಯರ ಪಾತ್ರವೂ ಪ್ರಮುಖವಾಗಿದೆ ಹೀಗಿರುವಾಗ ಸ್ಥಳೀಯರನ್ನು ಗುರುತಿಸದೇ ಕಡೆಗಣಿಸಿರುವುದು ನಿಜಕ್ಕೂ ಬೇಸರ ತಂದಿದೆ ಎಂದರು.
ಇದೇ ವೇಳೆ ಇನ್ನೋರ್ವ ಮುಖಂಡ ಸುಕುಮಾರ್ ಶ್ರೀಯಾನ್ ಅವರು, ಇಲ್ಲಿ ಬೀಚ್ ಚಂದಗಾಣಿಸುತ್ತಿರುವವರು ಇಲ್ಲಿನ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ. ಈ ಪರಿಸರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಇದಕ್ಕೆ ಬೇಕಾದ ರಕ್ಷಣಾ ವ್ಯವಸ್ಥೆ ಮಾಡುವಂತೆ ಈ ಹಿಂದೆಯೇ ಕೇಳಿಕೊಂಡಿದ್ದೆವು. ಇದರ ರಕ್ಷಣೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈ ಬಗ್ಗೆ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಮಳೆಗೆ ಇಲ್ಲಿನ ವ್ಯವಸ್ಥೆಗಳು ನೀರುಪಾಲಾಗುವ ಸಾಧ್ಯತೆ ಇದೆ. ಇದರಿಂದ ಜನರ ತೆರಿಗೆ ಹಣವೂ ವ್ಯರ್ಥವಾಗುತ್ತದೆ. ಇದರೊಂದಿಗೆ ಈ ಬೀಚ್ ಗೆ ಆಗಮಿಸುವ ಪ್ರವಾಸಿಗರ ವಾಹನದಿಂದ ರೋಡ್ ಬ್ಲಾಕ್ ಆಗುತ್ತಿದ್ದು. ಇದರಿಂದ ಸ್ಥಳೀಯರಿಗೆ ಸಮಸ್ಯೆಗಳಾಗುತ್ತಿದೆ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದರು.
ಈ ಬಗ್ಗೆ ಶಾಸಕ ಲಾಲಾಜಿ ಮೆಂಡನ್ ಕೂಡ ಇಲಾಖೆ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತ ಪಡಿಸಿದರು. ಈ ಸಂಧರ್ಭ ಸ್ಥಳೀಯರನ್ನು ಜಿಲ್ಲಾಧಿಕಾರಿ ಸಮಾಧಾನಪಡಿಸಿ, ಮುಂದಿನ ದಿನಗಳಲ್ಲಿ ಸ್ಥಳೀಯರ ಜೊತೆಗೂಡಿ ಬೀಚ್ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.