ಮಂಗಳೂರು: 15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢ
ಮಂಗಳೂರು: ಇತ್ತ ಶಾಲಾ ಕಾಲೇಜುಗಳು ಮತ್ತೆ ಆರಂಭವಾದರೆ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗಬಹುದು ಎಂಬ ಆತಂಕದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದಿಂದ ಮಂಗಳೂರಿಗೆ ಬಂದ 15 ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಜನವರಿ 1ರಿಂದ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಕೇರಳದಿಂದ 613 ವಿದ್ಯಾರ್ಥಿಗಳು ಮಂಗಳೂರಿನ ನರ್ಸಿಂಗ್ ಕಾಲೇಜ್ ಗಳಿಗೆ ಆಗಮಿಸಿದ್ದರು. ಈ ಪೈಕಿ 15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರ ನಡುವೆ ಮತ್ತೊಂದು ಆತಂಕಗೊಳಪಡಿಸುವ ವಿಚಾರ ಅಂದ್ರೆ, ಕೇರಳದಿಂದ ಬಂದಿದ್ದ 613 ವಿದ್ಯಾರ್ಥಿಗಳ ಪೈಕಿ 200 ವಿದ್ಯಾರ್ಥಿಗಳು ಮಾತ್ರ ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ತಂದಿದ್ದರು. ಉಳಿದ ವಿದ್ಯಾರ್ಥಿಗಳು ಸರ್ಕಾರದ ನಿಯಮ ಪಾಲಿಸದೆ ಬಂದಿದ್ದು, ಇದೀಗ ನಿಯಮ ಉಲ್ಲಂಘಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಂಡ ನರ್ಸಿಂಗ್ ಕಾಲೇಜಿಗೆ ಸರ್ಕಾರದಿಂದ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ವರದಿ ತರದಿದ್ದ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯಿಂದಲೇ ಟೆಸ್ಟ್ ಮಾಡಿಸಿದ ವೇಳೆ 15 ಮಂದಿ ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ಈ 15 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ಬೆನ್ನಲ್ಲೇ ಜಿಲ್ಲೆಯ ಎಲ್ಲಾ ನರ್ಸಿಂಗ್ ಕಾಲೇಜುಗಳಿಗೆ ಆರೋಗ್ಯ ಇಲಾಖೆ ನೋಟೀಸ್ ಜಾರಿ ಮಾಡಿದ್ದು, ತರಗತಿಗೆ ಆರಂಭದ 72 ಗಂಟೆಗೂ ಮುನ್ನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳು ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಸಲ್ಲಿಸುವಂತೆ ಸೂಚನೆ ಹೊರಡಿಸಿದೆ. ಸರ್ಕಾರದ ನಿಯಮ ಪಾಲನೆ ಮಾಡದಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುದಾಗಿ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ. |